ಕಳಪೆಮಟ್ಟದ ರಾಜಕಾಲುವೆ ನಿರ್ಮಾಣ-ತನಿಖೆಗೆ ಒತ್ತಾಯ

ರಾಯಚೂರು.ಜೂ.19- ವಾರ್ಡ್‌ ನಂ. 30, 31 ರ ಸಿಯಾತಲಾಬ್ ಬಡಾವಣೆಯಲ್ಲಿ ನಿರ್ಮಿಸಲ್ಪಟ್ಟಿರುವ ಕಳಪೆ ಮಟ್ಟದ ರಾಜಕಾಲುವೆ ಕಾಮಗಾರಿ ತನಿಖೆಗೊಳಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಮಹಾಸಭಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸೀಯಾತಲಾಬ್ ಬಡಾವಣೆಯಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ನೀರು ಮನೆಯೊಳಗೆ ನುಗ್ಗಿರುವುದರಿಂದ ಜನರು ತೀವ್ರ ತೊಂದರೆ ಎದುರಿಸಬೇಕಾಯಿತು. ಬಡಾವಣೆಯಲ್ಲಿ ಬಡವರು, ಕೂಲಿಕಾರರು, ದೀನದಲಿತರು ಸೇರಿದಂತೆ ಇತರೆ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಆದರೆ, ನಿನ್ನೆ ಸುರಿದ ಧಾರಾಕಾರ ಮಳೆಯಿಂದ ರಾಜಕಾಲುವೆ ಸಂಪೂರ್ಣ ಭರ್ತಿಯಾಗಿ ನಿವಾಸಿಗಳ ಮನೆಗೆ ನೀರು ನುಗ್ಗಿರುವುದರಿಂದ ಜನರು ಪರದಾಡಬೇಕಾಯಿತು.

ಕಾಲುವೆಯ ನೀರು ಹರಿಯದೆ ಮನೆಗಳಿಗೆ ನುಗ್ಗಿರುವುದರಿಂದ ಜನರು ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಮಟ್ಟದ ರಾಜಕಾಲುವೆ ನಿರ್ಮಿಸಿರುವುದು ಮೇಲ್ಕಂಡ ಅನಾಹುತಕ್ಕೆ ಕಾರಣವಾಗಿದೆ. ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮನೆ ನಿರ್ಮಿಸಬೇಕು, ಸಿಯಾತಲಾಬ್ ಕೆರೆ ಒತ್ತುವರಿದಾರರನ್ನು ತೆರವುಗೊಳಿಸಿ ಕೆರೆ ಒತ್ತುವರಿಗೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಭವನ ಶೀಘ್ರ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಧ್ಯಕ್ಷ ಕೆ.ಇ.ಕುಮಾರ, ದೇವೇಂದ್ರ, ಶ್ರೀನಿವಾಸ, ವೀರೇಶ, ಯಲ್ಲಪ್ಪ, ನರಸಪ್ಪ, ಗಂಗಣ್ಣ, ಯಂಕಮ್ಮ, ಸುಶಿಲಮ್ಮ, ನರಸಮ್ಮ, ನಾಗಮ್ಮ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment