ಕಲ್ಲಡ್ಕ ಉದ್ವಿಗ್ನ

ಪೊಲೀಸರಿಂದ ಯುವತಿಯ ರಕ್ಷಣೆ
ಬಂಟ್ವಾಳ, ಜು.೧೨- ಭಿನ್ನಧರ್ಮೀಯ ಗೆಳತಿಯ ಸಂಬಂಧಿಕರ ಮನೆಗೆ ತೆರಳಿದ್ದ ವಿಚಾರಕ್ಕೆ ಸಂಬಂಧಿಸಿ ಕಲ್ಲಡ್ಕ ಪೇಟೆ ಉದ್ವಿಗ್ನಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಯುವತಿ ಅನ್ಯಧರ್ಮೀಯರ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಗುಂಪೊಂದು ಮನೆಯ ಮೇಲೆ ದಾಳಿ ನಡೆಸಲು ಮುಂದಾಗಿದ್ದು ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ಸ್ಥಳಕ್ಕಾಗಮಿಸಿ ಯುವತಿಯನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಡ್ಕ ಶ್ರೀರಾಮ ಹೈಸ್ಕೂಲ್ ಸಮೀಪ ಘಟನೆ ನಡೆದಿದೆ.
ಆಂಧ್ರ ಮೂಲದ ಭಿನ್ನಧರ್ಮಕ್ಕೆ ಸೇರಿದ ಇಬ್ಬರು ಗೆಳತಿಯರು ರಾತ್ರಿ ಬೆಂಗಳೂರಿಗೆ ಹೋಗಲಿರುವ ಕಾರಣ ಕಲ್ಲಡ್ಕಕ್ಕೆ ಬಂದಿದ್ದರು. ಅಲ್ಲಿ ಯುವತಿಯೊಬ್ಬಳ ನೆಂಟರ ಮನೆಯಿದ್ದು, ಇಬ್ಬರೂ ಅಲ್ಲಿಗೆ ತೆರಳಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಮನೆಗೆ ದಾಳಿ ನಡೆಸುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಕ್ಷಣ ಕಾರ್ಯಪ್ರವೃತರಾದ ಬಂಟ್ವಾಳ ಠಾಣಾ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ, ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ತದನಂತರ ಮೆಲ್ಕಾರ್ ಎಂಬಲ್ಲಿ ಭದ್ರತೆ ನೀಡಿ ಪ್ರತ್ಯೇಕವಾಗಿ ಬಸ್ ಹತ್ತಿಸಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಇವರಿಬ್ಬರು ಖಾಸಗಿ ಕಾಲೇಜೊಂದರ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದಾರೆ. ಇವರಿಬ್ಬರಿಗೆ ಮುಂದಿನ ವಾರ ಬೆಂಗಳೂರಿನಲ್ಲಿ ಪರೀಕ್ಷೆ ಇತ್ತು ಎನ್ನಲಾಗಿದೆ.

Leave a Comment