ಕಲ್ಪತರು ನಾಡಿನಲ್ಲಿ ಅರಳಿದ ಕಮಲ

ತುಮಕೂರು, ಮೇ ೧೬- ಜೆ‌ಡಿಎಸ್ ಭದ್ರಕೋಟೆಯಾಗಿದ್ದ ಕಲ್ಪತರು ನಾಡಿನ 11 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನೆಲೆ ಕಂಡುಕೊಳ್ಳುವ ಮೂಲಕ ಮುದುಡಿದ ಕಮಲ ಅರಳಿದಂತಾಗಿದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಸಮರ್ಥ ಜಿಲ್ಲಾ ಅಧ್ಯಕ್ಷರ ಕೊರತೆಯಿಂದಾಗಿ ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಕಮಲ ಅರಳದೆ ಮುದುಡಿ ಹೋಗಿತ್ತು.

ಕಳೆದ ಎರಡು ವರ್ಷದಿಂದೀಚೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಿ.ಬಿ. ಜ್ಯೋತಿಗಣೇಶ್ ಅವರ ಸಂಘಟನೆ ಹಾಗೂ ಅವಿರತ ಶ್ರಮದ ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಕಮಲ ಅರಳುವಂತಾಗಿದೆ.

ಜೆಡಿಎಸ್ ಭದ್ರಕೋಟೆಯಾಗಿದ್ದ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಟಿ. ಕೃಷ್ಣಪ್ಪ ಅವರನ್ನು ಈ ಬಾರಿ ಪರಾಭವಗೊಳಿಸುವ ಮೂಲಕ ಬಿಜೆಪಿ ಮಸಾಲೆ ಜಯರಾಂ ಖಾತೆ ತೆರೆದಿದ್ದಾರೆ. ಹಾಗೆಯೇ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಸಹ ಬಿಜೆಪಿಯ ಜೆ.ಸಿ. ಮಾಧುಸ್ವಾಮಿ ಅವರು ಜೆಡಿಎಸ್‌ನ ಸಿ.ಬಿ. ಸುರೇಶ್‌ಬಾಬು ಅವರನ್ನು ಪರಾಜಯಗೊಳಿಸಿ ಅಸ್ತಿತ್ವ ಕಂಡುಕೊಂಡಿದ್ದಾರೆ.

ತಿಪಟೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಕೆ. ಷಡಕ್ಷರಿ ಅವರನ್ನು ಬಿಜೆಪಿಯ ಬಿ.ಸಿ. ನಾಗೇಶ್ ಅವರು ಸೋಲಿಸುವ ಮೂಲಕ ಗೆಲುವು ಸಾಧಿಸಿದ್ದರೆ, ತುಮಕೂರು ನಗರ ಕ್ಷೇತ್ರದಲ್ಲಿ ಸ್ವತಃ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್ ಅವರು ಕಾಂಗ್ರೆಸ್‌ನ ರಫೀಕ್ಅಹಮದ್‌ವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ತುಮಕೂರಿನಲ್ಲಿ ಮತ್ತೆ ಬಿಜೆಪಿಯ ಬಾವುಟವನ್ನು ಹಾರಿಸಿದ್ದಾರೆ.

ತುಮಕೂರು ನಗರ ಕ್ಷೇತ್ರದಲ್ಲಿ 20 ವರ್ಷಗಳ ಕಾಲ ಸೊಗಡು ಶಿವಣ್ಣ ಅವರು ಬಿಜೆಪಿಯ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ಕಳೆದ ಬಾರಿ ಕೆಜೆಪಿ-ಬಿಜೆಪಿಯಿಂದ ಸೋಲನುಭವಿಸಿದ್ದರು. ಇದೀಗ ಮತ್ತೆ ಜ್ಯೋತಿಗಣೇಶ್ ಅವರು ನಗರದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯ ಬಾವುಟನ್ನು ನೆಟ್ಟಿದ್ದಾರೆ.

 ಮತದಾರರಿಗೆ ಜ್ಯೋತಿಗಣೇಶ್ ಕೃತಜ್ಞತೆ

ಕಲ್ಪತರು ನಾಡಿನ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಕಾರಣಕರ್ತರಾಗಿರುವ ಮತದಾರರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ. ಜ್ಯೋತಿಗಣೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.

ತುಮಕೂರು ನಗರ ಕ್ಷೇತ್ರದಲ್ಲಿ ತಮ್ಮ ಮತ ನೀಡಿ ಗೆಲುವಿಗೆ ಕಾರಣರಾದ ಮತದಾರರಿಗೆ ಹಾಗೂ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತದಾರರಿಗೆ ಪಕ್ಷದ ವತಿಯಿಂದ ಕೃತಜ್ಞತೆ ಸಲ್ಲಿಸುವುದಾಗಿ ಜ್ಯೋತಿಗಣೇಶ್ ತಿಳಿಸಿದ್ದಾರೆ.

Leave a Comment