ಕಲ್ಪತರುನಾಡು ಸಂಪೂರ್ಣ ಸ್ತಬ್ದ

ತುಮಕೂರು, ಮೇ ೨೪- ಕೊರೊನಾ ಮಹಾಮಾರಿಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಭಾನುವಾರದ ಲಾಕ್‌ಡೌನ್‌ಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದಲ್ಲಿ 4ನೇ ಹಂತದ ಲಾಕ್‌ಡೌನ್‌ನ್ನು ಕೆಲವು ನಿಯಮಗಳನ್ನು ಸ‌ಡಿಲ ಮಾಡಿ ಜಾರಿಗೊಳಿಸಿದ ನಂತರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಎಲ್ಲ ಅಂಗಡಿ-ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಆದರೆ ರಾಜ್ಯ ಸರ್ಕಾರದ ಭಾನುವಾರ ಸಂಪೂರ್ಣ ಲಾಕ್‌ಡೌನ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಇಂದು ಕಲ್ಪತರುನಾಡಿನಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಸಂಪೂರ್ಣ ಸ್ತಬ್ದಗೊಂಡಿವೆ.

ಎಲ್ಲ ಅಂಗಡಿಗಳು, ಬಸ್‌‌ಗಳ ಸೇವೆಗಳು ಸಂಪೂರ್ಣ ಬಂದ್ ಆಗುವುದನ್ನು ಮತ್ತೆ ನೋಡಲು ಸಾಧ್ಯವಾಗುವುದಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದ ಜನಸಾಮಾನ್ಯರಿಗೆ ರಾಜ್ಯ ಸರ್ಕಾರದ ಭಾನುವಾರದ ಲಾಕ್‌ಡೌನ್ ಮತ್ತೆ ನೋಡಲು ಅವಕಾಶ ಮಾಡಿಕೊಟ್ಟಿದೆ.

4ನೇ ಹಂತದ ಲಾಕ್‌ಡೌನ್ ಜಾರಿಯಾದ 10 ದಿನಗಳ ಬಳಿಕ ಇದೀಗ ಕಲ್ಪತರುನಾಡು ಸಂಪೂರ್ಣ ಲಾಕ್‌ಡೌನ್ ಆಗಿದೆ.

ಅಗತ್ಯ ಸೇವೆಗಳಾದ ಔಷಧಿ ಅಂಗಡಿಗಳು, ಹಾಲು, ಮಾಂಸ, ಮೀನು ಮಾರಾಟದ ಅಂಗಡಿಗಳು, ದಿನಸಿ ಅಂಗಡಿ, ಹಣ್ಣು, ತರಕಾರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ.
ಇನ್ನು ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಬಸ್, ಲಾರಿ, ಕಾರು, ಆಟೋರಿಕ್ಷಾ ಸೇರಿದಂತೆ ಯಾವುದೇ ರೀತಿಯ ದೊಡ್ಡ ವಾಹನಗಳು ರಸ್ತೆಗಿಳಿದಿಲ್ಲ.

ಮನೆಯಲ್ಲಿರದೇ ರಸ್ತೆಯಲ್ಲಿ ಅಡ್ಡಾಡಲು ದ್ವಿಚಕ್ರ ವಾಹನದಲ್ಲಿ ರಸ್ತೆಗಳಿದಿರುವ ಪುಂಡ ಪೋಕರಿಗಳಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಲಾಕ್‌ಡೌನ್ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಇಂದು ಭಾನುವಾರ ಆಗಿರುವುದರಿಂದ ಜನಸಾಮಾನ್ಯರು ಅದರಲ್ಲೂ ಮಾಂಸ ಪ್ರಿಯರು ಮಾಂಸ, ಚಿಕನ್, ಮೀನುಗಳನ್ನು ಖರೀದಿಸಲು ಮಾಂಸದ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಗಿ ಬಿದ್ದಿರುವ ದೃಶ್ಯಗಳು ಜಿಲ್ಲೆಯಾದ್ಯಂತ ಕಂಡು ಬಂದವು.

ಭಾನುವಾರದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಅಶೋಕ ರಸ್ತೆ, ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆಯಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಜನರು ಮತ್ತು ವಾಹನಗಳ ಓಡಾಟ ಇಲ್ಲದೇ ನೀರವ ಮೌನ ಆವರಿಸಿತ್ತು.

ಕೊರೊನಾ ಲಾಕ್‌ಡೌನ್‌ನಿಂದ ಅಪಾರ ನಷ್ಟ ಅನುಭವಿಸಿರುವ ಖಾಸಗಿ ಬಸ್ ಮಾಲೀಕರಂತೂ ಸರ್ಕಾರದ ನಿಯಮಗಳನ್ನು ಪಾಲಿಸಲಾಗದೆ ಇನ್ನೂ ಖಾಸಗಿ ಬಸ್‌ಗಳನ್ನು ರಸ್ತೆಗಿಳಿಸಿಲ್ಲ. ಹಾಗಾಗಿ ಖಾಸಗಿ ಬಸ್ ನಿಲ್ದಾಣ ಎಂದಿನಂತೆ ಪ್ರಯಾಣಿಕರು ಮತ್ತು ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿದ್ದರು, ಕೆಎಸ್ಸಾರ್ಟಿಸಿ ಬಲ್ ನಿಲ್ದಾಣದ ಒಳಗೆ ಹೋಗುವ ಹಾಗೂ ಹೊರಗೆ ಹೋಗಲು ಇರುವ ದ್ವಾರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಕಳೆದ 10-12 ದಿನಗಳಿಂದ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದ ಜನಸಾಮಾನ್ಯರು ಸಹ ಇಂದು ಭಾನುವಾರ ಆಗಿರುವುದರಿಂದ ಯಾರೊಬ್ಬರೂ ಅನಗತ್ಯವಾಗಿ ರಸ್ತೆಗಿಳಿಯದೆ ಸರ್ಕಾರದ ಲಾಕ್‌ಡೌನ್ ಆದೇಶವನ್ನು ಮನೆಯಲ್ಲೇ ಇದ್ದುಕೊಂಡು ಪಾಲಿಸುತ್ತಿದ್ದಾರೆ.

ಈಗಾಗಲೇ ನಗರದ ನಾಲ್ಕು ಕಡೆ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಸಕ್ರಿಯರಾಗಿದ್ದು, ಯಾವುದೇ ವಾಹನಗಳು ರಸ್ತೆಗಳಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದ ತಕ್ಷಣ ತಪಾಸಣೆ ನಡೆಸಿ ಮಾಹಿತಿ ಕಲೆ ಹಾಕಿ ಅಗತ್ಯ ಇದ್ದರೆ ಮಾತ್ರ ಓಡಾಡಾಲು ಅನುಮತಿ ನೀಡುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದವರಿಗೆ ದಂಡ ಶುಲ್ಕ ವಿಧಿಸುವ ಮೂಲಕ ಲಾಕ್‌ಡೌನ್ ಬಿಸಿ ಮುಟ್ಟಿಸಿ ಮನೆಗಳತ್ತ ವಾಪಸ್ ಕಳುಹಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

Share

Leave a Comment