ಕಲಾರಾಧನೆಯ ಕಾಯಕದಲ್ಲಿ ಮಧುಚಂದ್ರ

ಕಲೆ ಯಾರ ಸ್ವತ್ತೂ ಅಲ್ಲ. ಅದರ ಹಿಂದೆ ಬಿದ್ದು ಶ್ರಮಪಟ್ಟು ಅದನ್ನು ಕರಗತ ಮಾಡಿಕೊಂಡವರ ಸ್ವತ್ತು. ಇಂತಹ ಧ್ಯೇಯವನ್ನಿಟ್ಟುಕೊಂಡು ನಗರಕ್ಕೆ ಮಾತ್ರ ಸೀಮಿತವಾಗದೇ ಗ್ರಾಮೀಣ ಮಕ್ಕಳಿಗೂ ನೃತ್ಯ, ಸಂಗೀತ, ಯೋಗ, ಕರಾಟೆಗಳಂಥ ವಿದ್ಯೆಯನ್ನು ಅತೀ ಕಡಿಮೆ ಶುಲ್ಕದಲ್ಲಿ ಕಲಿಸುವ ಕಾರ್ಯ ಮಾಡುತ್ತಿದ್ದಾರೆ ಕಲಾವಿದ ಮಧುಚಂದ್ರ ಎಂ. ಆರ್.  ಹುಟ್ಟುತ್ತಲೇ ಕಲಾ ಪ್ರಪಂಚಕ್ಕೇ ಸೀಮಿತ ಎಂಬ ಅದೃಷ್ಟ ಕೆಲವು ಕಲಾ ಕುಟುಂಬದ ಕುಡಿಗಳಿಗೆ ಒಲಿದು ಬಂದಿರುತ್ತದೆ. ಆದರೆ ಕಲೆಯ ಗಂಧ ಗಾಳಿಯೇ ಇಲ್ಲದೆ ಕಲಾಹ್ವನೆಗಾಗಿ ಕಲಾತಪಸ್ಸು ಮಾಡಿದ ಕಲಾವಿದ ಮಧುಚಂದ್ರ..

ಬಾಲ್ಯದ ೭ನೇ ತರಗತಿವರೆಗೂ ಕಲೆಯ ಮೇಲೆ ಆಸಕ್ತಿ ಇತ್ತೇ ಹೊರತು ಸೂಕ್ತ ಮಾರ್ಗದರ್ಶನವಿರಲಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಹೇಳಿಕೊಡುವ ನಾಟಕ, ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸುವ ಜಾಣ್ಮೆ ಇದ್ದ ಮಧುಗೆ ಶಿಕ್ಷಕರೊಬ್ಬರ ಪ್ರೇರಣೆಯಿಂದ ಭರತನಾಟ್ಯ ಕಲಿಯುವ ಆಸೆ ಚಿಗುರಿತು.
ನಂತರ ಗುರು ರಾಜೀವ್ ಅವರ ಬಳಿ ೧೪ನೇ ವಯಸ್ಸಿಗೇ ನೃತ್ಯಾಭ್ಯಾಸ ಆರಂಭಿಸಿ ನಂತರ ಗುರು ವಿದೂಷಿ ಕೆ. ಬೃಂದಾ ಹಾಗೂ ಪ್ರಸ್ತುತ ಗುರು ಸತ್ಯನಾರಾಯಣ ರಾಜು ಅವರ ಬಳಿ ನೃತ್ಯಾಭ್ಯಾಸ ಮುಂದುವರೆಸಿದ್ದಾರೆ.

ನೃತ್ಯದಲ್ಲಿ ಎಂಎ ಪದವಿ ಪಡೆದಿರುವ ಮಧು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್, ಸೀನಿಯರ್, ವಿದ್ವತ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದು, ಗಂಧರ್ವ ಮಹಾವಿದ್ಯಾಲಯ ನಡೆಸುವ ಪರೀಕ್ಷೆಗಳಲ್ಲೂ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ವತ್ ಪೂರ್ಣ ಕಲಾವಿದ. ಜಾನಪದ ಕಲಾ ಲೋಕದಲ್ಲೂ ಪರಿಣತಿ ಸಾಧಿಸಲು ಜಾನಪದ ಲೋಕದಲ್ಲಿ ಜಾನಪದ ನೃತ್ಯದಲ್ಲಿ ಡಿಪ್ಲೊಮಾ ಮಾಡಿ ತಮ್ಮ ನೃತ್ಯ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.

ರಷ್ಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ಪ್ರದರ್ಶನ ನೀಡಿರುವ ಮಧು ದೇಶದ ಪ್ರತಿಷ್ಠಿತ ವೇದಿಕೆಗಳಾದ ತಂಜಾವೂರು ಉತ್ಸವ, ಕಾಮನ್‌ವೆಲ್ತ್ ಕ್ರೀಡಾ ಉತ್ಸವ, ಹಂಪಿ ಉತ್ಸವ, ದಸರಾ ಉತ್ಸವ, ಉಡುಪಿ ಕೃಷ್ಣ ಮಠ ಉತ್ಸವ, ಖಜರಾವೋ ಅಂತಾರಾಷ್ಟ್ರೀಯ ಆರ್ಟ್ ಫೆಸ್ಟಿವಲ್, ನಟರಾಜೋತ್ಸವ, ಡ್ಯಾನ್ಸ್ ಜಾತ್ರೆ, ವಿಶ್ವ ಕನ್ನಡ ಸಮ್ಮೇಳನ, ಕಿತ್ತೂರು ಉತ್ಸವ, ಯುವಜನೋತ್ಸವ, ವಿಶ್ವ ಕನ್ನಡ ಸಮ್ಮೇಳನದಂಥ ನೂರಾರು ವೇದಿಕೆಗಳಲ್ಲಿ ತಮ್ಮ ನೃತ್ಯ ಚತುರತೆಯನ್ನು ಪ್ರದರ್ಶಿಸಿ ಪ್ರಶಂಸೆ ಪಡೆದಿದ್ದಾರೆ.

ಪ್ರಸ್ತುತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ (ಬೆಂಗಳೂರು ಪೂರ್ವ-ಸರ್ಜಾಪುರ) ನೃತ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಧು ಅವರು ನಂದಿಕೇಶ್ವರ ನೃತ್ಯ ಶಾಲೆ ಹಾಗೂ ಡ್ಯಾನ್ಸ್ ಫ್ಯಾಕ್ಟರಿ ಎಂಬ ನೃತ್ಯ ಸಂಸ್ಥೆಗಳನ್ನು ಸ್ಥಾಪಿಸಿ ೨೦೦ಕ್ಕೂ ಹೆಚ್ಚು ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೃತ್ಯ ಕಲಿಕೆಯ ಮೂಲಕ ಮುಂದಿನ ಪೀಳಿಗೆಗೆ ಕಲೆಯನ್ನು ಪಸರಿಸುತ್ತಿದ್ದಾರೆ.

Leave a Comment