ಕಲಬುರಗಿ: ಹೋಟೆಲ್ ಪುನರಾರಂಭಕ್ಕೆ ಸಿದ್ಧತೆ

 

ಕಲಬುರಗಿ,ಮೇ.29-ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಜಾರಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಹೋಟೆಲ್ ಗಳನ್ನು ಜೂ.1 ರಂದು ಪುನರಾರಂಭಿಸಲು ಸಿದ್ಧತೆ ನಡೆದಿದೆ.

ಕೆಲವು ಷರತ್ತುಗಳಿಗೆ ಒಳಪಟ್ಟು ಜೂನ್ 1 ರಿಂದ ಹೋಟೆಲ್ ಆರಂಭಿಸಲು ಸರ್ಕಾರ ಅನುಮತಿ ನೀಡುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ನಗರದ ಹೋಟೆಲ್, ಬೇಕರಿ ಮತ್ತು ವಸತಿಗೃಹ ಪುನರಾರಂಭಿಸಲು ತಯಾರಿ ನಡೆಸಲಾಗುತ್ತಿದೆ.

ಮೂರು ತಿಂಗಳಿಂದ ಬಂದ್ ಆಗಿದ್ದ ಹೋಟೆಲ್, ಬೇಕರಿ ಮತ್ತು ವಸತಿಗೃಹಗಳನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಹೋಟೆಲ್ ಪುನರಾರಂಭದ ನಂತರ ಅನುಸರಿಸಬೇಕಾದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಯಾರಿ ನಡೆಸಲಾಗುತ್ತಿದೆ.

ಹೋಟೆಲ್ ಗಳನ್ನು ಪುನರಾರಂಭಿಸಿದಲ್ಲಿ ಹೋಟೆಲ್ ಗಳಲ್ಲಿ ಕೆಲಸ ಮಾಡುವವರು, ಅಡುಗೆ ಮಾಡುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸ್ಯಾನಿಟೈಸ್ ಇಡಬೇಕು, ನಾಲ್ಕು ಜನ ಕೂರುವ ಸೌಲಭ್ಯ ಇರುವ ಆಸನಗಳಲ್ಲಿ ಇಬ್ಬರಿಗೆ, ಇಬ್ಬರು ಕೂರುವ ಸೌಲಭ್ಯ ಇರುವ ಆಸನಗಳಲ್ಲಿ ಒಬ್ಬರಿಗೆ ಮಾತ್ರ ಕೂರುವ ಅವಕಾಶ ಕಲ್ಪಿಸಬೇಕು ಎಂಬ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಸತಿ ಗೃಹಗಳಲ್ಲಿ ಒಂದು ಕೋಣೆಯಲ್ಲಿ ಇರಲು ಒಬ್ಬರಿಗೆ ಮಾತ್ರ ಅವಕಾಶ ನೀಡುವ, ಅವರು ಕೋಣೆ ಖಾಲಿ ಮಾಡಿದ ನಂತರ ಅದನ್ನು ಸ್ವಚ್ಛಗೊಳಿಸಿ ಎರಡು ದಿನಗಳ ನಂತರ ಮತ್ತೊಬ್ಬ ಗ್ರಾಹಕರಿಗೆ ನೀಡಬೇಕು ಎಂಬ ನಿಯಮ ಪಾಲಿಸಬೇಕಾಗುತ್ತದೆ.

“ಹೋಟೆಲ್, ಬೇಕರಿ ಮತ್ತು ವಸತಿಗೃಹಗಳ ಪುನರಾರಂಭಕ್ಕೆ ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು, ಮುಖ್ಯಮಂತ್ರಿಗಳು ಈ ಬಗ್ಗೆ ಇಂದು ಅಥವಾ ನಾಳೆ ಅಧಿಕೃತ ಆದೇಶ ಹೊರಡಿಸಲಿದ್ದಾರೆ. ಸರ್ಕಾರದ ಆದೇಶ ಮತ್ತು ಮಾರ್ಗಸೂಚಿ ಅನುಸಾರ ಹೋಟೆಲ್ ಪುನರಾರಂಭಿಸಲಾಗುವುದು. ಹೋಟೆಲ್ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡುವ ಭರವಸೆ ಇರುವ ಹಿನ್ನೆಲೆಯಲ್ಲಿ ಹೋಟೆಲ್, ಬೇಕರಿ ಮತ್ತು ವಸತಿ ಗೃಹಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ” ಎಂದು ಕಲಬುರಗಿ ಹೋಟೆಲ್, ಬೇಕರಿ, ವಸತಿಗೃಹ ಮಾಲೀಕರ ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್ “ಸಂಜೆವಾಣಿ”ಗೆ ತಿಳಿಸಿದರು.

 

Share

Leave a Comment