ಕಲಬುರಗಿ ಹೈಕೋರ್ಟ್ ಪೀಠದ ದಶಮಾನೋತ್ಸವ

ನ್ಯಾಯಾಲಯಗಳಿರುವುದು ಜನರಿಗಾಗಿ : ನ್ಯಾ.ಎಸ್.ಅಬ್ದುಲ್ ನಜೀರ್

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಸೆ.8-“ನ್ಯಾಯಾಲಯಗಳು ಇರುವುದು ಜನರಿಗಾಗಿಯೇ ಹೊರತು ಜನರು ನ್ಯಾಯಾಲಯಗಳಿಗಾಗಿ ಇರುವುದಿಲ್ಲ” ಎಂದು ಸುಪ್ರೀಂಕೋರ್ಟ್  ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಹೇಳಿದರು.

ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಹೈಕೋರ್ಟ್ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಹೈಕೋರ್ಟ ಪೀಠದ ದಶಮಾನೋತ್ಸವ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ನಡವಳಿಕೆಗಳು ನ್ಯಾಯ ಸಮ್ಮತವಾಗಿದ್ದಲ್ಲಿ ಕೋರ್ಟ್, ಕಚೇರಿಗಳ ಅಗತ್ಯ ಇರುವುದಿಲ್ಲ ಎಂದರು.

ಬಸವಣ್ಣನವರ “ಕಳಬೇಡ, ಕೊಲಬೇಡ ಹುಸಿಯ ನುಡಿಯಲುಬೇಡ ಅನ್ಯರ ಬಗ್ಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ” ವಚನ ಉದ್ಧರಿಸಿದ ಅವರು, ಈ ವಚನಗಳಲ್ಲಿನ “ಬೇಡ”ಗಳನ್ನು ಪಾಲಿಸಿದರೆ ನ್ಯಾಯಸಮ್ಮತವಾದ ಬದುಕು ನಡೆಸಲು ಸಾಧ್ಯವಿದೆ ಎಂದರು.

ಕಲಬುರಗಿ ಹೈಕೋರ್ಟ್ ಪೀಠ ಇನ್ನೂ 10 ವರ್ಷದ ಮಗು. ಈ ಮಗುವಿನ್ನೂ ಬೆಳೆಯುವ ಹಂತದಲ್ಲಿದ್ದು, ಹೆಚ್ಚಿನ ನಿರೀಕ್ಷೆ ಮಾಡುವುದು ತರವಲ್ಲ. ಈ ಪೀಠ ಆರಂಭವಾಗಲು ನ್ಯಾಯಾಂಗದ ದೃಷ್ಟಿಯಿಂದ ಮೂವರು ಮಹನಿಯರನ್ನು ಸ್ಮರಿಸಬೇಕಾಗಿದೆ ಎಂದ ಅವರು ನ್ಯಾಯಮೂರ್ತಿಗಳಾದ ಜೋಸೆಫ್, ಎನ್.ಕೆ.ಜೈನ್ ಮತ್ತು ಎನ್.ಕೆ.ಪಾಟೀಲ ಅವರ ಹೆಸರನ್ನು ಸ್ಮರಿಸಿದರು. ಪೀಠಕ್ಕೆ ಕರ್ನಾಟಕ ಹೈಕೋರ್ಟನ ಮುಖ್ಯ ನ್ಯಾಯಮೂರ್ತಿಗಳಾದ ದಿನೇಶ ಮಹೇಶ್ವರಿ ಅವರು ಘನತೆ ತಂದುಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಹೈಕೋರ್ಟ ಪೀಠ ಸ್ಥಾಪನೆಯಿಂದಾಗಿ ಕಕ್ಷಿದಾರರ ಮನೆ ಬಾಗಿಲಿಗೆ ನ್ಯಾಯ ತೆಗೆದುಕೊಂಡು ಹೋದಂತಾಗಿದೆ ಎಂದ ಅವರು ಕಳೆದ ಹತ್ತುವರ್ಷಗಳ ಅವಧಿಯಲ್ಲಿ 1.30 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಪಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರನ್ನು ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಹೈಕೋರ್ಟ ನ್ಯಾಯವಾದಿಗಳ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ, ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಮೇಲಿದ್ದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ರವಿ ಮಳಿಮಠ, ಎನ್.ಕೆ.ಸುಧೀಂದ್ರರಾವ, ಎಸ್.ಸುಜಾತಾ, ಮಹ್ಮದ್ ನವಾಜ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಕಾಶಿನಾಥ ಜೆ.ಮೊತಕಪಳ್ಳಿ, ಕೆ.ಕೋಟೇಶ್ವರ,  ಶರಣಯ್ಯ ಜಿ.ಮಠ, ಸತೀಶ ಆರ್.ಪಾಟೀಲ, ಗೊಪಾಲಕೃಷ್ಣ ಯಾದವ, ಬಿ.ಎನ್.ಪಾಟೀಲ, ಹಿರಿಯ ನ್ಯಾಯವಾದಿ ವಿಲಾಸಕುಮಾರ, ಅಮರೇಶ ಉಡಚಣ, ವೈಜನಾಥ ಝಳಕಿ, ಆನಂದ ಶಿವಶರಣಪ್ಪ, ನಾಗೇಂದ್ರಪ್ಪ ಎ.ಪೂಜಾರಿ, ಮಹ್ಮದ್ ಫಯಾಜ್, ಗಣಪತರಾವ ಜಮಾದಾರ, ಕಾಮರಾಜ ಕಟ್ಟಳ್ಳಿ, ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

ಹೃದಯ ಬಿಚ್ಚಿ ಕನ್ನಡದಲ್ಲಿ ಮಾತನಾಡಿದ ನ್ಯಾಯಮೂರ್ತಿ

ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ದಶಮಾನೋತ್ಸವ ಸಮಾರಂಭದಲ್ಲಿ ಸುಪ್ರೀಂಕೋರ್ಟನ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಲಿಖಿತ ಭಾಷಣ ಬಿಟ್ಟು ಹೃದಯ ಬಿಚ್ಚಿ ಕನ್ನಡದಲ್ಲಿ ಮಾತನಾಡಿದರು.

ನ್ಯಾಯಮೂರ್ತಿಗಳು ಕನ್ನಡದಲ್ಲಿ ಭಾಷಣ ಆರಂಭಿಸುತ್ತಿದ್ದಂತೆಯೇ ಎಲ್ಲರ ಚಪ್ಪಾಳೆ ತಟ್ಟುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಕಲಬುರಗಿಗೆ ಬಂದಾಗ ಸಂತೋಷಕ್ಕೆ ಮಿತೀಯೇ ಇರುವುದಿಲ್ಲ. ಅದಕ್ಕೆ ಈ ಮಣ್ಣಿನ ಗುಣ ಕಾರಣವಿರಬೇಕು. ಒಂದು ಬಾರಿ ಮನಸು ಬೆಸಗೊಂಡರೆ ಅದಕ್ಕೆ ಮಿತಿಯೇ ಇರುವುದಿಲ್ಲ ಎಂದ ಅವರು ಬಸವಣ್ಣನವರ “ಎಮ್ಮವರು ಬೆಸಗೊಂಡರೆ…” ವಚನ ಓದಿದರು.

Leave a Comment