ಕಲಬುರಗಿ ಸೇರಿ ರಾಜ್ಯದ 14 ಪೊಲೀಸ್ ತರಬೇತಿ ಶಾಲೆ ಮೇಲ್ದರ್ಜೆಗೆ

ಕಲಬುರಗಿ,ಸೆ.23-ಕಲಬುರಗಿ ಸೇರಿದಂತೆ ರಾಜ್ಯದ ಹದಿನಾಲ್ಕು ಪೊಲೀಸ್ ತರಬೇತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿಂದು ನಡೆದ ಪಿಎಸ್ಐ ಹಾಗೂ ಆರ್.ಎಸ್.ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರಂಭದಲ್ಲಿ ಮೈಸೂರು ಪಿಟಿಸಿಯನ್ನು ಸೆಂಟರ್ ಆಪ್ ಎಕ್ಸಿಲೆನ್ಸ್ (ಶ್ರೇಷ್ಠತೆಯ ಕೇಂದ್ರ) ಮಾಡಲಾಗುವುದು. ತದನಂತರ ಉಳಿದ ಶಾಲೆಗಳನ್ನು ಹಂತ ಹಂತವಾಗಿ ಉನ್ನತಿಕರಣಗೊಳಿಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ  “ಸೈಬರ್ ಕ್ರೈಂ” ಹೆಚ್ಚಾಗುತ್ತಿರುವುದರಿಂದ ತರಬೇತಿ ಅವಧಿಯಲ್ಲಿ ಪೊಲೀಸರಿಗೆ ಇ-ಲರ್ನಿಂಗ್, ಇ- ಪೊಲೀಸಿಂಗ್  ಕುರಿತು ತರಬೇತಿ ನೀಡಲಾಗುವುದು.

ಫೋರೆನ್ಸಿಕ್ , ಭದ್ರತೆ, ಸಂಚಾರ ನಿರ್ವಹಣೆಯಲ್ಲಿ ವೃತ್ತಿಪರತೆ ಹೆಚ್ಚಿಸಲು ರಾಜ್ಯದ ಪೊಲೀಸರಿಗೆ ಅಮೆರಿಕ, ಸ್ಕಾಟ್ಲ್ಯಾಂಡ್ ಸೇರಿದಂತೆ ವಿದೇಶದಲ್ಲಿ ತರಬೇತಿ ನೀಡಲಾಗುವುದು.

ಮುಂದಿನ ಎರಡು ವರ್ಷದಲ್ಲಿ 16 ಸಾವಿರ ಪೊಲೀಸ್ ಪೇದೆ, 600ಕ್ಕೂ ಹೆಚ್ಚು ಪಿ.ಎಸ್.ಐ.ನೇಮಕಗೊಳಿಸಲಾಗುವುದು ಎಂದು ತಿಳಿಸಿದರು.

ಪೊಲೀಸರಿಗೆ ಶಿಸ್ತು ತಾಯಿ, ನ್ಯಾಯ ತಂದೆ ಇದ್ದಂತೆ. ಇದನ್ನು ಮೈಗೂಡಿಸಿಕೊಂಡಲ್ಲಿ ಕರ್ತವ್ಯ ನಿರ್ವಹಣೆ ಸಲಿಸವಾಗಲಿದೆ ಎಂದರು.

ಅಪರಾಧ ಪ್ರಕರಣಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಶೀಘ್ರವಾಗಿ ನೊಂದವರಿಗೆ ನ್ಯಾಯ ದೊರಕಿಸಿ ಎಂದು ಕರೆ ನೀಡಿದರು.

Leave a Comment