ಕಲಬುರಗಿ: ವಿವಿಧೆಡೆ ಅಂಬೇಡ್ಕರ್ ಜಯಂತಿ ಸಂಭ್ರಮ

 

ಕಲಬುರಗಿ,ಏ.14-ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 128ನೇ ಜಯಂತ್ಯೋತ್ಸವವನ್ನು ನಗರದ ವಿವಿಧೆಡೆ ಇಂದು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಜಿಲ್ಲಾಡಳಿತ ಮತ್ತು ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ 128ನೇ ಜಯಂತ್ಯೋತ್ಸವ ಸಮಿತಿ ನಗರದ ಜಗತ್ ವೃತ್ತದಲ್ಲಿಂದು ಬೆಳಿಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಜಯಂತ್ಯೋತ್ಸವ ಆಚರಿಸಿದರೆ, ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ತಮ್ಮ ತಮ್ಮ ಬಡಾವಣೆಗಳಲ್ಲಿ ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸುವುದರ ಮೂಲಕ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸಿದವು. ವಿವಿಧ ರಾಜಕೀಯ ಪಕ್ಷಗಳು ತಮ್ಮ ಕಚೇರಿಯಲ್ಲಿ ಡಾ.ಅಂಬೇ‌ಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅಂಬೇಡ್ಕರ್ ರವರ 128ನೇ ಜಯಂತಿಯನ್ನು ಆಚರಿಸಿದವು.

ನಗರದ ಜಗತ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಬೆಳಿಗ್ಗೆಯೇ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ., ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ಮನೀಷ್ ಖರ್ಬೇಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸಿದ್ಧಾರ್ಥ ಬುದ್ಧ ವಿಹಾರದ ಸಂಘಾನಂದ ಭಂತೇಜಿ ಸೇರಿದಂತೆ ಮತ್ತಿತರ ಗಣ್ಯರು ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಡಿದರು. ಡಾ.ಅಂಬೇಡ್ಕರ್ ರವರ 128ನೇ ಜಯಂತ್ಯೋತ್ಸವ ಸಮಿತಿ ಗೌರವಾಧ್ಯಕ್ಷ, ಹಿರಿಯ ದಲಿತ ಮುಖಂಡ ವಿಠ್ಠಲ ದೊಡ್ಡಮನಿ, ಅಧ್ಯಕ್ಷ ಅವಿನಾಶ ಗಾಯಕವಾಡ, ಮಹಾನಗರ ಪಾಲಿಕೆ ಸದಸ್ಯ ರಾಜಕುಮಾರ ಕಪನೂರ, ದೇವೇಂದ್ರ ಸಿನ್ನೂರ, ದಿನೇಶ ಗಾಯಕವಾಡ, ರಮೇಶ ಚಿಮ್ಮಾಇದ್ಲಾಯಿ, ರಾಜು ಕೊರಳ್ಳಿ ಸೇರಿದಂತೆ ಮತ್ತಿತರರು ಡಾ.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಶಿಲ್ಪಿಗೆ ನಮನ ಗೌರವ ನಮನ ಸಲ್ಲಿಸಿದರು.

ಅಲ್ಲದೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಗಣ್ಯರು ಸೇರಿದಂತೆ ನಗರದ ವಿವಿಧೆಡೆಯಿಂದ ಸಹಸ್ರಾರು ಜನ ಆಗಮಿಸಿ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪನಮನ ಸಲ್ಲಿಸಿದರು. ಬೆಳಿಗ್ಗೆಯಿಂದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಯ ಬಳಿ ಜನಜಂಗುಳಿಯೇ ನೆರೆದಿತ್ತು. ವಿವಿಧ ಬಡಾವಣೆಗಳ ಯುವಕರು, ಮಹಿಳೆಯರು ಅಂಬೇಡ್ಕರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸುತ್ತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು.

ಡಾ.ಬಿ.ಆರ್.ಅಂಬೇ‌ಡ್ಕರ್ ರವರ ಜಯಂತಿ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳು ನಗರದ ಬಸ್ ನಿಲ್ದಾಣ, ಜಗತ್ ವೃತ್ತ ಸೇರಿದಂತೆ ವಿವಿಧೆಡೆ ಕುಡಿಯುವ ನೀರು ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಜಯಂತ್ಯೋತ್ಸವ ಹಿನ್ನೆಲೆಯಲ್ಲಿ ಇಂದು ಸಾಯಂಕಾಲ ನಗರದ ವಿವಿಧ ಬಡಾವಣೆಗಳಿಂದ ಡಾ.ಬಿ.ಆರ್.ಅಂಬೇ‌ಡ್ಕರ್, ಭಗವಾನ ಬುದ್ಧರ ಪ್ರತಿಮೆ ಮತ್ತು ಭಾವಚಿತ್ರಗಳ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆಯ ಹೊತ್ತಿಗೆ ಜಗತ್ ವೃತ್ತದಲ್ಲಿ ಎಲ್ಲೆಡೆಯಿಂದ ಆಗಮಿಸಿದ ಮೆರವಣಿಗೆ ತಂಡಗಳು ಒಗ್ಗೂ‌ಡುವುದರಿಂದ ಜನಜಂಗುಳಿಯೇ ಸೇರುವುದು. ಜಗತ್ ವೃತ್ತದಲ್ಲಿ ಒಂದು ರೀತಿಯ ಹಬ್ಬದ ಸಂಭ್ರಮ, ಸಡಗರ ಮನೆ ಮಾಡುವುದು.

@12bc = ಸಂಜೆ ಬೃಹತ್ ಮೆರವಣಿಗೆ

ಡಾ.ಬಿ.ಆರ್.ಅಂಬೇಡ್ಕರ್ ರವರ 128ನೇ ಜಯಂತ್ಯೋತ್ಸವ ಸಮಿತಿ ವತಿಯಿಂದ ಇಂದು ಸಂಜೆ 4 ಗಂಟೆಗೆ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಗತ್ ವೃತ್ತದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಉದ್ಘಾಟಿಸಲಿದ್ದು, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಿದ್ದರಾಮ ಶರಣರು ಬೆಲ್ದಾಳ್, ಖ್ಯಾತ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಹೈಕೋರ್ಟ ನ್ಯಾಯವಾದಿ ಅನಂತ ನಾಯಕ ಉಪನ್ಯಾಸ ನೀಡುವರು.

 

Leave a Comment