ಕಲಬುರಗಿ ವಿಮಾನ ನಿಲ್ದಾಣ: ಒಡಂಬಡಿಕೆಗೆ ಅಂಕಿತ

ಕಲಬುರಗಿ,ಆ.24-ಇಲ್ಲಿಗೆ ಸಮೀಪದ ಶ್ರೀನಿವಾಸ ಸರಡಗಿ ಬಳಿ ನಿರ್ಮಾಣವಾಗಿರುವ ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಮಂತ್ರಲಾಯ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದೊಂದಿಗಿನ ಒಪ್ಪಂದಕ್ಕೆ ಇಂದು ಸಹಿ ಮಾಡಲಾಗಿದೆ.

ಬೆಂಗಳೂರಿನ ವಿಧಾನಸೌಧದಲ್ಲಿಂದು ನಡೆದ ಒಪ್ಪಂದಕ್ಕೆ ಸಹಿ ಹಾಕುವ ಪ್ರಕ್ರಿಯೆ ವೇಳೆ ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ್, ಅವಿನಾಶ ಜಾಧವ, ಮಾಜಿ ಸಚಿವ ಬಾಬುರಾವ ಚಿಂಚನಸೂರ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಧಿಕಾರಿಗಳಾದ ಕಪೀಲ್ ಮೋಹನ್, ಕರೋಲಾ, ಕೆ.ಎಸ್.ಐ.ಐ.ಡಿಸಿ ನಿರ್ದೇಶಕ ಗಂಗಾರಾಮ ಬಡೇರಿಯಾ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮತ್ತು ಏರಪೋರ್ಟ್ ಅಥಾರಿಟಿಯ ಅಧಿಕಾರಿಗಳು ಹಾಜರಿದ್ದರು.

” ಕಲಬುರ್ಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ವಹಿಸಲು ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದ ಒಪ್ಪಂದವನ್ನು ಮಾಡಲಾಗಿದ್ದು, ಕೇಂದ್ರ ಸರ್ಕಾರದ ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ವಿಮಾನ ನಿಲ್ದಾಣ ಅಭಿವೃದ್ಧಿ, ಕಾರ್ಯನಿರ್ವಹಣೆಯನ್ನು ಕೈಗೊಳ್ಳುವುದರಿಂದ ಹಿಂದುಳಿದ ಪ್ರದೇಶವಾದ ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ದೇಶದ ಹಾಗೂ ರಾಜ್ಯದ ರಾಜಧಾನಿಯೊಂದಿಗೆ ವಿಮಾನಯಾನ ಸಂಪರ್ಕವನ್ನು ಕಲ್ಪಿಸುವುದಕ್ಕೆ ಅನುಕೂಲವಾಗಲಿದೆ. ಅಲ್ಲದೆ ಹೈದರಾಬಾದ್ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಸಂಸದ ಡಾ.ಉಮೇಶ ಜಾಧವ ಅವರು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರ 27.3.2017 ರಂದು ಆಡಳಿತಾತ್ಮಕ ಅನುಮೋದನೆ ನೀಡಿತ್ತು. 742 ಎಕರೆ ಜಮೀನಿನಲ್ಲಿ ರೂ.22 ಕೋಟಿಗಳ ಭೂಸ್ವಾಧೀನ ವೆಚ್ಚ ಹಾಗೂ ರೂ.181 ಕೋಟಿಗಳ ನಿರ್ಮಾಣ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ಇದುವರೆಗೆ ಒಟ್ಟಾರೆ ರೂ.203 ಕೋಟಿ ವೆಚ್ಚಮಾಡಲಾಗಿದೆ. ವಿಮಾನ ನಿಲ್ದಾಣ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಮೇ.ರೈಟ್ಸ್ ಪ್ರೈ.ಲಿಮಿಟೆಡ್ ಅವರನ್ನು ತಾಂತ್ರಿಕ ಸಲಹೆಗಾರರಾಗಿ ನೇಮಿಸಲಾಗಿತ್ತು. ವಿಮಾನ ನಿಲ್ದಾಣದ ಕಾಮಗಾರಿಗಳು ಪೂರ್ಣಗೊಂಡಿದ್ದರಿಂದ 2018ರ ಆಗಸ್ಟ್ ನಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆದಿತ್ತು.

ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ-3.0 (ಆರ್.ಸಿ.ಎಸ್-3.0) ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗೆ ಆಯ್ಕೆಯಾಗಿದ್ದು, ಅಲೈಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈ.ಲಿಮಿಟೆಡ್ ವಿಮಾನಯಾನ ಕಾರ್ಯಾಚರಣೆ ಒದಗಿಸಲು ಆಯ್ಕೆಯಾಗಿದೆ.

ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು-ಕಲಬುರಗಿ-ಬೆಂಗಳೂರು, ಕಲಬುರಗಿ-ಹಿಂಡನ್(ಉತ್ತರ ಪ್ರದೇಶದ ಗಾಜಿಯಾಬಾದ)-ಕಲಬುರಗಿ, ಕಲಬುರಗಿ-ತಿರುಪತಿ-ಕಲಬುರಗಿ ಮಾರ್ಗ ಆಯ್ಕೆಗೊಂಡಿದ್ದು, ಈ ಮಾರ್ಗವಾಗಿ ವಿಮಾನ ಸಂಚರಿಸಲಿವೆ.

ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಎಸ್.ಪುರಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹ್ವಾನಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಎಲ್ಲವು ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ 17 ರಂದು ವಿಮೋಚನಾ ದಿನಾಚರಣೆಯಂದೇ ವಿಮಾನ ನಿಲ್ದಾಣ ಉದ್ಘಾಟನೆಯಾಗಬಹುದು. ಆ ಮೂಲಕ ಈ ಭಾಗದ ಜನರ ಬಹುದಿನ ಕನಸು ನನಸಾದಂತಾಗಲಿದೆ.

@12bc = ಶೀಘ್ರ ಕಾರ್ಯಾರಂಭ

ಕಲಬುರಗಿ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು. “ಸಂಜೆವಾಣಿ”ಯೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ನಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲು ಮನವಿ ಮಾಡಲಾಗಿದೆ. ಪರವಾನಿಗೆ ಇತ್ಯಾದಿ ನಿಯಮಗಳ ಅನುಮೋದನೆ ದೊರೆಯಲು ಸ್ವಲ್ಪ ವಿಳಂಬವಾಗಬಹುದು ಎಂದರು.

Leave a Comment