ಕಲಬುರಗಿ: ವಿಮಾನಯಾನ ಪುನರಾರಂಭ

 

ಕಲಬುರಗಿ,ಮೇ.25-ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳಿಂದ (ಮಾ.12ರಿಂದ) ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನವು ಲಾಕ್ ಡೌನ್ ನಂತರ ಪ್ರಥಮ ಬಾರಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು.

ಬೆಳಿಗ್ಗೆ 8-40 ಗಂಟೆಗೆ 25 ಜನ ಯಾತ್ರಿಕರನ್ನು ಕರೆದುಕೊಂಡು ಹೊರಟ ವಿಮಾನ 9.30 ಗಂಟೆಗೆ ಕಲಬುರಗಿ ನೆಲದಲ್ಲಿ ಲ್ಯಾಂಡ್ ಮಾಡಿತು. ತದನಂತರ 10.30 ಗಂಟೆಗೆ ಇಲ್ಲಿಂದ ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಸೇರಿದಂತೆ 20 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ದೇಶಿಯ ವಿಮಾನಯಾನ ಸೇವೆಗೆ ಕೆಲ ದಿನಗಳ ಹಿಂದೆ ವಿಮಾನಯಾನ ಸಚಿವಾಲಯ ಹಸಿರು ನಿಶಾನೆ ತೋರಿದ ಪರಿಣಾಮ ಸೋಮವಾರದಿಂದ (ಮೇ-25) ದೇಶದಾದ್ಯಂತ ಕೊರೋನಾ ಹರಡದಂತೆ ಸುರಕ್ಷತಾ ಕ್ರಮದೊಂದಿಗೆ ವಿಮಾನಯಾನ ಸಂಚಾರವು ಆರಂಭಗೊಂಡಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಅರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇತು ಯ್ಯಾಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಲಗೇಜ್‍ಗಳನ್ನು ಡಿಸಿನ್ಫೆಕ್ಟ್ ಮಾಡಿಯೆ ವಿಮಾನಕ್ಕೆ ಹತ್ತಿಸಲಾಗುತ್ತದೆ. ಇನ್ನು ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಗುವುದಲ್ಲದೆ ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ  ಸಿಬ್ಬಂದಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಣಾನೇಶ್ವರ ರಾವ್ ತಿಳಿಸಿದರು.

ಇಂದಿನಿಂದ ಸ್ಟಾರ್ ಏರ್ ಸಂಸ್ಥೆಯು ತನ್ನ ವಿಮಾನ ಸಂಚಾರ ಸೇವೆ ಅರಂಭಿಸಿದ್ದು, ಅಲಾಯನ್ಸ್ ಏರ್ ಸಹ ಶೀಘ್ರದಲ್ಲಿಯೆ ಸೇವೆ ಆರಂಭಿಸಲಿದೆ ಎಂದು ಜ್ಣಾನೇಶ್ವರ ತಿಳಿಸಿದರು.

ಸ್ಟಾರ್ ಏರ್ ಸಂಸ್ಥೆಯ ವಿಮಾನವು ವಾರದಲ್ಲಿ 7 ದಿನ ಸಂಚರಿಸಲಿದ್ದು, ಅಲಾಯನ್ಸ್ ಏರ್ ಸಂಸ್ಥೆಯ ವಿಮಾನ ವಾರದಲ್ಲಿ 3 ದಿನ ಸಂಚರಿಸಲಿದೆ ಎಂದು ತಿಳಿದುಬಂದಿದ್ದು, ಯಾವಾಗಿನಿಂದ ಸೇವೆ ಆರಂಭಿಸಲಿದೆ ಎಂಬುವುದಿನ್ನೂ ಖಚಿತಪಡಿಸಿಲ್ಲ.

Share

Leave a Comment