ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಸತೀಶಕುಮಾರ ಅಧಿಕಾರ ಸ್ವೀಕಾರ

 

ಕಲಬುರಗಿ,ಏ.3-ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಎನ್.ಸತೀಶ್ ಕುಮಾರ ಅವರು ಇಂದು ಅಧಿಕಾರ ಸ್ವೀಕರಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸತೀಶ್ ಕುಮಾರ ಅವರು ನಗರ ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು ಅವರಿಂದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು (ಕೋವಿಡ್-19) ಹರಡುವುದನ್ನು ತಡೆಯಲು ದೇಶವ್ಯಾಪಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಅದರಂತೆ ಕಲಬುರಗಿಯಲ್ಲಿಯೂ ಲಾಕ್ ಡೌನ್ ನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ. ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ನಗರ ಪ್ರವೇಶಿಸುವ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿಯೇ ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ. ಇನ್ನು ನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೈಕ್ ಸೇರಿದಂತೆ ಇತರೆ ವಾಹನಗಳಲ್ಲಿ ಓಡಾಡುವವರನ್ನು ವಿಚಾರಣೆ ನಡೆಸಿ ಅನಗತ್ಯವಾಗಿ ಓಡಾಡುವುದನ್ನು ಕಂಡು ಬಂದಲ್ಲಿ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಜಪ್ತಿ ಮಾಡಿದ ವಾಹನಗಳನ್ನು ಅದರ ವಾರಸುದಾರರಿಗೆ ಲಾಕ್ ಡೌನ್ ಮುಗಿಯುವವರೆಗೆ ಹಿಂತಿರುಗಿಸುವುದಿಲ್ಲ. ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ವಾಹನ ಜಪ್ತಿ ಮಾಡಲಾಗುತ್ತಿದೆಯೇ ಹೊರತು ಯಾರ ವಿರುದ್ಧವು ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಿಲ್ಲ. ಪ್ರಕರಣ ದಾಖಲಿಸಿಕೊಂಡು ಬಂಧಿಸಿದರೆ ಅವರನ್ನು ಕೂಡು ಹಾಕಬೇಕಾಗುತ್ತದೆ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳವುದು ಕಷ್ಟವಾಗುವುದರಿಂದ ಬಂಧಿಸುತ್ತಿಲ್ಲ. ಹೀಗಂತ ಯಾರೂ ಲಾಕ್ ಡೌನ್ ನಿಯಮ ಉಲ್ಲಂಘಿಸಬೇರದು. ಕೊರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಎಲ್ಲರ ಪಾತ್ರವು ಪ್ರಮುಖವಾಗಿದೆ. ಕಲಬುರಗಿ ನಗರದ ಜನತೆ ಮೊದಲಿನಿಂದಲೂ ಲಾಕ್ ಡೌನ್ ನಿಯಮ ಪಾಲಿಸಿ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ. ಇಲ್ಲಿನ ಜನರ ಸಹಕಾರದಿಂದಾಗಿಯೇ ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಸಹಕಾರಿಯಾಗಿದೆ. ಮುಂದೆಯೂ ಜನ ಲಾಕ್ ಡೌನ್ ನಿಯಮ ಪಾಲಿಸುವುದರ ಮೂಲಕ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಕೋರಿದರು.

ಅಗತ್ಯವಸ್ತುಗಳು ಮತ್ತು ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗಬೇಕಾದ ಅವಶ್ಯಕತೆ ಇಲ್ಲ, ನಡೆದುಕೊಂಡೇ ಹತ್ತಿರದಲ್ಲಿರುವ ಕಿರಾಣಿ ಅಂಗಡಿ ಮತ್ತು ತರಕಾರಿ ಅಂಗಡಿಗೆ ಒಬ್ಬರೆ ಹೋಗಿ ಅಂತರ ಕಾಯ್ದುಕೊಂಡು ಅಗತ್ಯವಸ್ತು ಖರೀದಿಸಿದರೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.

Leave a Comment