ಕಲಬುರಗಿ: ತಗ್ಗಿದ ಬಿಸಿಲ ತಾಪ

 

ಕಲಬುರಗಿ,ಮೇ.31-ಬಿಸಿಲನಾಡು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ತಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮೇ ಮೊದಲ, ಎರಡನೇ ಮತ್ತು ಮೂರನೇ ವಾರದಲ್ಲಿ ಹೆಚ್ಚಾಗಿದ್ದ ಬಿಸಿಲು ಕೊನೆಯವಾರದಲ್ಲಿ ಕಡಿಮೆಯಾಗಿರುವುದು ಬಿರು ಬಿಸಿಲಿನಿಂದ ಬಸವಳಿದಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಉತ್ತರ ಕರ್ನಾಟಕದ ಜನ ಕಳೆದೊಂದು ವಾರದಿಂದ ಬಿರು ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದರು. ಸುಡು ಬಿಸಿಲಿನ ಕಾರಣಕ್ಕೆ ಮಧ್ಯಾಹ್ನದ ವೇಳೆ ಜನ ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಕಲಬುರಗಿಯಲ್ಲಂತೂ  44.4, 44.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಮತ್ತು 29 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಕನಿಷ್ಠ ತಾಪಮಾನ ದಾಖಲಾದುದ್ದರಿಂದ ಜನ ಹಗಲು ಬಿಸಿಲ ಬೇಗೆಯಿಂದ, ರಾತ್ರಿ ಧಗೆ ಮತ್ತು ಬಿಸಿ ಗಾಳಿಯಿಂದ ಬೇಸತ್ತು ಹೋಗಿದ್ದರು.

ಇದೀಗ ಬಿಸಿಲ ತಾಪ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಶನಿವಾರ ಕಲಬುರಗಿಯಲ್ಲಿ 42.3 ಗರಿಷ್ಠ ಮತ್ತು 29.2 ಕನಿಷ್ಠ ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನ ಸ್ವಲ್ಪ ಕಡಿಮೆಯಾಗಿದ್ದರೂ ಕನಿಷ್ಠ ತಾಪಮಾನ ಹೆಚ್ಚಾಗಿರುವುದರಿಂದ ರಾತ್ರಿ ವೇಳೆ ಧಗೆ ಹೆಚ್ಚಾಗಿದೆ.

ಇನ್ನು ರಾಯಚೂರಿನಲ್ಲಿ 42.0 ಗರಿಷ್ಠ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ, ಬೀದರ್ ನಲ್ಲಿ 41.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 23.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ, ವಿಜಯಪುರದಲ್ಲಿ 39.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 24.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ, ಕೊಪ್ಪಳದಲ್ಲಿ 37.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ, ಗದಗನಲ್ಲಿ 36.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 24.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ದಕ್ಷಿಣ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಗರಿಷ್ಠ 29.0, ಕನಿಷ್ಠ 19.0 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿಯೇ ಅತೀ ಕಡಿಮೆ ಉಷ್ಣಾಂಶ ಇಲ್ಲಿ ದಾಖಲಾಗಿದೆ.

Share

Leave a Comment