ಕಲಬುರಗಿ,ಯಾದಗಿರಿ, ಬೀದರ್, ವಿಜಯಪುರ ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ಹಂಚಿಕೆ

ಕಲಬುರಗಿ,ಏ.16-ಕಲಬುರಗಿ ಜಿಲ್ಲೆಯ 9 ಮತ್ತು ಯಾದಗಿರಿ ಜಿಲ್ಲೆಯ 4, ಬೀದರ್ ಜಿಲ್ಲೆಯ 6, ವಿಜಯಪುರ ಜಿಲ್ಲೆಯ 6 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಭಾನುವಾರ ಬಿಡುಗಡೆಯಾಗಿದ್ದು, ಯಾವುದೇ ಗೊಂದಲ ಮತ್ತು ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡದೆ ನಿರೀಕ್ಷೆಯಂತೆ ಟಿಕೆಟ್ ಹಂಚಿಕೆ ಮಾಡಲಾಗಿದೆ.

ಕಲಬುರಗಿ ದಕ್ಷಿಣ ಮತ್ತು ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುವುದು ಮಾತ್ರ ತೀವ್ರ ಕುತೂಹಲ ಕೆರಳಿಸಿತ್ತು, ದಕ್ಷಿಣದಲ್ಲಿ ಲಿಂಗಾಯತ ಸಮುದಾಯದ ಅಲ್ಲಮಪ್ರಭು ಪಾಟೀಲ ಮತ್ತು ಗ್ರಾಮೀಣ ಮೀಸಲು ಕ್ಷೇತ್ರದಲ್ಲಿ ಮಾಜಿ ಶಾಸಕ ಡಾ.ಜಿ.ರಾಮಕೃಷ್ಣ ಅವರ ಪುತ್ರ ವಿಜಯಕುಮಾರ ಅವರಿಗೆ ಟಿಕೆಟ್ ನೀಡುವುದರ ಮೂಲಕ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.

ಅಫಜಲಪುರ ಕ್ಷೇತ್ರದಿಂದ ನಿರೀಕ್ಷೆಯಂತೆ ಎಂ.ವೈ.ಪಾಟೀಲ, ಜೇವರ್ಗಿ-ಡಾ.ಅಜಯಸಿಂಗ್, ಸೇಡಂ-ಡಾ.ಶರಣಪ್ರಕಾಶ ಪಾಟೀಲ, ಚಿಂಚೋಳಿ (ಎಸ್.ಸಿ) -ಡಾ.ಉಮೇಶ ಜಾಧವ, ಕಲಬುರಗಿ ಉತ್ತರ-ಖನ್ನೀಸಾ ಫಾತಿಮಾ, ಆಳಂದ-ಬಿ.ಆರ್.ಪಾಟೀಲ, ಚಿತ್ತಾಪುರ (ಎಸ್.ಸಿ) ಪ್ರಿಯಾಂಕ ಖರ್ಗೆ ಅವರಿಗೆ ಟಿಕೆಟ್ ನೀಡಿದರೆ, ಯಾದಗಿರಿ ಜಿಲ್ಲೆಯ ಸುರಪುರ (ಎಸ್.ಸಿ)- ರಾಜಾವೆಂಕಟಪ್ಪ ನಾಯಕ, ಶಹಾಪುರ-ಶರಣಬಸಪ್ಪ ದರ್ಶನಾಪುರ, ಯಾದಗಿರಿ-ಡಾ.ಎ.ಬಿ.ಮಾಲಕರೆಡ್ಡಿ, ಗುರುಮಿಠಕಲ್-ಬಾಬುರಾವ ಚಿಂಚನಸೂರ ಅವರಿಗೆ ಟಿಕೆಟ್ ನೀಡಲಾಗಿದೆ.

ನಿರೀಕ್ಷೆಯಂತೆ ಕಾಂಗ್ರೆಸ್ ಟಿಕೆಟ್ ಹಂಚಿಕೆಯಾಗಿರುವುದರಿಂದ ಅವಳಿ ಜಿಲ್ಲೆಯಗಳಲ್ಲಿ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯಗಳು ಇದುವರೆಗೆ ಭುಗಿಲೆದ್ದಿಲ್ಲ.

ಮಾಜಿ ಶಾಸಕ ಮಾಲೀಕಯ್ಯ ವಿ.ಗುತ್ತೇದಾರ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬೆನ್ನಹಿಂದೆಯೇ ಮಾಜಿ ಶಾಸಕ ಎಂ.ವೈ.ಪಾಟೀಲ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಎಂ.ವೈ.ಪಾಟೀಲ ಅವರಿಗೆ ಟಿಕೆಟ್ ದೊರೆಯುವುದು ಖಚಿತವಾಗಿತ್ತು. ಅದರಂತೆ ಆ ಕ್ಷೇತ್ರದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದ ಅಲ್ಲಮಪ್ರಭು ಪಾಟೀಲ ಅವರಿಗೆ ಟಿಕೆಟ್ ದೊರೆತಿದೆ. ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದ್ದಾಗಿತ್ತಾದರೂ ಕೊನೆಗಳಿಗೆಯಲ್ಲಿ ಅಲ್ಲಮಪ್ರಭು ಪಾಟೀಲ ಅವರಿಗೆ ಟಿಕೆಟ್ ನೀಡುವುದರ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ಕಲಬುರಗಿ ಗ್ರಾಮೀಣ ಮೀಸಲು ಮತಕ್ಷೇತ್ರದಲ್ಲಿಯೂ ಆಕಾಂಕ್ಷಿಗಳ ಪಟ್ಟಿ ದೊಡ್ಡದ್ದಾಗಿತ್ತು. ಶಾಸಕ ಜಿ.ರಾಮಕೃಷ್ಣ ಅವರ ಪುತ್ರ ವಿಜಯಕುಮಾರ ಅವರಿಗೆ ಟಿಕೆಟ್ ನೀಡುವುದರ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ಇನ್ನು ನಿರೀಕ್ಷೆಯಂತೆ ಕಲಬುರಗಿ ಉತ್ತರ ಮತಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಶಾಸಕ ಖಮರುಲ್ ಇಸ್ಲಾಂ ಅವರ ಪತ್ನಿ ಖನ್ನೀಸಾ ಫಾತಿಮಾ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನುಳಿದಂತೆ ಅವಳಿ ಜಿಲ್ಲೆಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ದೊರೆತಂತಾಗಿದೆ.

ಇನ್ನು ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ನಿರೀಕ್ಷೆಯಂತೆಯೇ ಕಾಂಗ್ರೆಸ್ ಟಿಕೆಟ್ ಹಂಚಿಕೆ ಮಾಡಲಾಗಿದೆ.

Leave a Comment