ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಶತಸಿದ್ಧ: ಜಾಧವ್

 

ಕಲಬುರಗಿ,ಜ.28-ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಶತಸಿದ್ಧ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ನಗರದ ರೈಲ್ವೆ ನಿಲ್ದಾಣದ ಮುಂದುಗಡೆ ಸ್ಥಾಪಿಸಲಾಗಿರುವ 100 ಅಡಿ ಉದ್ದದ ರಾಷ್ಟ್ರಧ್ವಜ ಸ್ಥಂಭ ಮತ್ತು ಹವಾನಿಯಂತ್ರಿತ ಕೋಣೆಯ, ರೈಲ್ವೆ ನಿಲ್ದಾಣದ ಸೌಂದರ್ಯೀಕರಣ ಮತ್ತು ವರ್ಟಿಕಲ್ ಗಾರ್ಡನ್ (ಲಂಬ ಉದ್ಯಾನ್) ಉದ್ಘಾಟನೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಲಬುರಗಿ ಮತ್ತು ಜಮ್ಮು-ಕಾಶ್ಮೀರ್ ದಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರು ಭರವಸೆ ನೀಡಿದ್ದಾರೆ. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಆಗೇ ಆಗುತ್ತದೆ ಎಂದು ಹೇಳಿದರು.

ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗಿನಿಂದ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಭರವಸೆ ನೀಡಿದ್ದು, ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಯ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಕಲಬುರಗಿ ರೈಲ್ವೆ ನಿಲ್ದಾಣ ಮುಂದುಗಡೆ ಇಂದು 100 ಅಡಿ ಉದ್ದದ ರಾಷ್ಟ್ರಧ್ವಜ ಸ್ಥಂಭ ಮತ್ತು ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಕೊಠಡಿ  ಉದ್ಘಾಟನೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕಲಬುರಗಿ ಮಾತ್ರವಲ್ಲದೆ ಲಾತೂರ್, ಅಹಮದಾಬಾದ್ ನಗರಗಳ ರೈಲ್ವೆ ನಿಲ್ದಾಣಗಳಲ್ಲಿಯೂ ಈಗಾಗಲೆ 100 ಅಡಿ ಉದ್ದದ ರಾಷ್ಟ್ರಧ್ವಜ ಸ್ಥಂಭದ ಉದ್ಘಾಟನೆಯಾಗಿದೆ ಎಂದು ತಿಳಿಸಿದರು.

@12bc = ತನಿಖೆಯಾಗಲಿ

ನಗರ ಹೊರವಲಯದ ಶ್ರೀನಿವಾಸ ಸರಡಗಿ ಬಳಿ ನಿರ್ಮಾಣ ಮಾಡಲಾಗಿರುವ ವಿಮಾನ ನಿಲ್ದಾಣ ಜಾಗದಲ್ಲಿದ್ದ ಸಂತ ಸೇವಾಲಾಲ್ ಮಂದಿರ ಧ್ವಂಸದ ಕುರಿತು ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬೀಳಲಿ ಎಂದು ಅವರು ಆಗ್ರಹಿಸಿದರು.

ಸಂತ ಸೇವಾಲಾಲ್ ಮಂದಿರ ಧ್ವಂಸದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು, ಈ ವಿಷಯದಲ್ಲಿ ರಾಜಕೀಯ ಮಾಡದೇ ಸತ್ಯಾಸತ್ಯತೆ ಹೊರಬೀಳಲು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸಂತ ಸೇವಾಲಾಲ್ ಮಂದಿರ ಧ್ವಂಸಗೊಳಿಸಿದ ವಿಷಯದಿಂದಾಗಿ ಕ್ರಾಂತಿಯೇ ಆಗುತ್ತಿತ್ತು. ಸಮಾಜ ಬಾಂಧವರನ್ನು ಸಮಾಧಾನಗೊಳಿಸಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿದ್ದೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

@12bc = ಸಾಹಿತ್ಯ ಸಮ್ಮೇಳನ : ರಾಜಕೀಯ ಬೇಡ

ಕಲಬುರಗಿಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಸುಸೂತ್ರವಾಗಿ ನಡೆಯುತ್ತಿದ್ದು, ಇದೊಂದು ಐತಿಹಾಸಿಕ ಸಮ್ಮೇಳನವಾಗಲಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನದ ಸಿದ್ಧತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಐಜಿಪಿ ಮನೀಷ್ ಖರ್ಬೇಕರ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಶೈಲೇಶ್ ಗುಪ್ತಾ, ಬಿಜೆಪಿ ಮುಖಂಡ ಶರಣಪ್ಪ ಅತನೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ 100 ಅಡಿ ಉದ್ದದ ಧ್ವಜಸ್ಥಂಭ

ನಗರದ ರೈಲ್ವೆ ನಿಲ್ದಾಣದ ಮುಂದೆ ಸ್ಥಾಪಿಸಲಾಗಿರುವ 100 ಅಡಿ ಉದ್ದದ ಧ್ವಜಸ್ಥಂಭ ಮತ್ತು ವಹಾನಿಯಂತ್ರಿತ ಕೋಣೆಯನ್ನು ಸಂಸದ ಡಾ.ಉಮೇಶ ಜಾಧವ್ ಇಂದು ಉದ್ಘಾಟಿಸಿದರು.

ಧ್ವಜಸ್ಥಂಭ ಉದ್ಘಾಟಿಸಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್, ಕಲಬುರಗಿ, ಲಾತೂರ, ಅಹಮದನಗರ ರೈಲು ನಿಲ್ದಾಣಗಳಲ್ಲಿ ಈಗಾಗಲೆ 100 ಅಡಿ ಉದ್ದದ ಧ್ವಜಸ್ಥಂಭ ಉದ್ಘಾಟನೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ದೇಶದ ಎಲ್ಲ ರೈಲು ನಿಲ್ದಾಣಗಳ ಮುಂದೆ 100 ಅಡಿ ಉದ್ದದ ಧ್ವಜಸ್ಥಂಭ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

Leave a Comment