ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಮಾನ್ಯತೆ

ನಿರಾಂತಕವಾಗಿ ವಿದ್ಯಾಭ್ಯಾಸಕ್ಕೆ ಅವಕಾಶ -ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಭರವಸೆ
ದಾವಣಗೆರೆ, ಸೆ. 1 – 2017 ರ ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರಸಕ್ತ ವರ್ಷ ಅಂದರೆ 2018-19ನೇ ಶೈಕ್ಷಣಿಕ ಸಾಲಿನಿಂದ 5 ವರ್ಷಗಳ ಅವಧಿಗೆ ಮಾನ್ಯತೆ ದೊರೆತಿದ್ದು ವಿವಿ ಕಾನೂನು ಬದ್ದವಾಗಿ ಕಾರ್ಯನಿರ್ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ಈ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ಪ್ರಾರಂಭಗೊಂಡಿದೆ. ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ವಿದ್ಯಾರ್ಥಿಗಳು ಕೆಎ ಎಸ್,ಐಎ ಎಸ್, ಐಪಿಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು, ಶಿಕ್ಷಣ ಇಲಾಖೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಹ್ವಾನಿಸುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಯಾವುದೇ ಆತಂಕವಿಲ್ಲದೆ ವಿದ್ಯಾರ್ಥಿಗಳು ವಿವಿಯಲ್ಲಿ ಪ್ರವೇಶ ಪಡೆಯಬಹುದಾಗಿದೆ. ಈ ಹಿಂದೆ ಕೆಲಗೊಂದಲಗಳಿಂದ ಮೂರು ವರ್ಷ ಅಂದರೆ 2014-15, 15-16, 16.17 ವರ್ಷ ಸುಮಾರು 1 ಲಕ್ಷದ 80 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಇದು ಬೇಸರದ ಸಂಗತಿ. ಆದರೆ ಈಗ ಯುಜಿಸಿಯ 2017 ರ ನಿಯಮಾವಳಿಗಳ ಪ್ರಕಾರ 2018-19ನೇ ಸಾಲಿನಿಂದ ಮಾನ್ಯತೆ ಪಡೆದಿದೆ. ವಿವಿಯಿಂದ 32 ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ 17 ಕೋರ್ಸ್ ಗಳಿಗೆ ಮಾತ್ರ ಮಾನ್ಯತೆ ದೊರೆತಿದೆ. ಈ ಬಾರಿಯ ಶೈಕ್ಷಣಿಕ ವರ್ಷಕ್ಕೆ ವಿವಿಧ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಅಧಿಕೃತ ವೆಬ್ ಸೈಟ್ www.ksoumysore.karnataka.gov.in ಬಿಡುಗಡೆ ಮಾಡಲಾಗಿದೆ. ಈ ವೆಬ್ ಸೈಟ್ ನಲ್ಲಿ ವಿವರಣಾ ಪುಸ್ತಕ. ಪ್ರವೇಶಾತಿ ಅರ್ಜಿ. ಅರ್ಜಿಯ ನಮೂನೆ, ಶುಲ್ಕ ಪಾವತಿಗಾಗಿ ಚಲನ್ ಗಳನ್ನು ಅಪ್ ಲೋಡ್ ಮಾಡಲಾಗಿದೆ. ದಾವಣಗೆರೆಯಲ್ಲಿ ಕರಾಮುವಿ ಪ್ರದೇಶಿಕ ಕೇಂದ್ರವು ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿದೆ. ಉಳಿದಂತೆ ಕಲಿಕಾ ಸಹಾಯ ಕೇಂದ್ರಗಳು ಎಸ್ ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚನ್ನಗಿರಿಯ ಶ್ರೀಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಚಿತ್ರದುರ್ಗದ ಶ್ರೀಜಗದ್ಗುರು ಮುರುಘಾರಾಜೇಂದ್ರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುತ್ತಮುತ್ತಲಿರುವ ವಿದ್ಯಾರ್ಥಿಗಳು ತಮ್ಮ ಕುಂದುಕೊರತೆಗಳ ಬಗ್ಗೆ ಇಲ್ಲಿಗೆ ಸಂಪರ್ಕಿಸಬಹುದಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ವಿದ್ಯಾಭ್ಯಾಸ ಮಾಡಬಹುದಾಗಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ, ರವಿ ಉಪಸ್ಥಿತರಿದ್ದರು.
 ಬಗೆಹರಿದ ಗೊಂದಲ
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಗುಣಮಟ್ಟ ಕಾಪಾಡಿಕೊಂಡಿದೆ. 1996-97ನೇ ಸಾಲಿನಲ್ಲಿ ಕೇವಲ 17 ಸಾವಿರವಿದ್ದ ವಿದ್ಯಾರ್ಥಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಲಕ್ಷಕ್ಕಿಂತಲೂ ಅಧಿಕವಾಗಿದೆ. ಆದರೆ ಮಾನ್ಯತೆಯ ಬಗ್ಗೆ ಯುಜಿಸಿ ಮಟ್ಟದಲ್ಲಿ ಕೆಲ ಗೊಂದಲಗಳು ಉಂಟಾಗಿತ್ತು. ಆದರೀಗ ಎಲ್ಲಾ ಸಮಸ್ಯೆಗಳು ಬಗೆಹರಿದಿದ್ದು, ವಿದ್ಯಾರ್ಥಿಗಳು ನಿರಾಂತಕವಾಗಿ ವಿದ್ಯಾಭ್ಯಾಸ ನಡೆಸಬಹುದಾಗಿದೆ. ಈ ಹಿಂದೆ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮಟ್ಟದಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿದ ಮೇಲೆ ಈ ಬಗ್ಗೆ ಕ್ರಮವಹಿಸಲಾಗುವುದು. ಹಾಗೂ 2013-14ನೇ ಸಾಲಿನಲ್ಲಿ ಪರೀಕ್ಷೆ ಕಟ್ಟಿದವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತನೆ ಇದೆ. ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗದಂತೆ 2014ನೇಸಾಲಿನಲ್ಲಿ ಜಾರಿ ಇದ್ದ ಬೋಧನಾ ಶುಲ್ಕವನ್ನೇ ಮುಂದುವರೆಸಲಾಗಿದೆ.
-ಪ್ರೊ.ಡಿ.ಶಿವಲಿಂಗಯ್ಯ
ಕುಲಪತಿಗಳು, ಕೆಎಸ್ಓಯು

Leave a Comment