ಕರ್ನಾಟಕ ಏಕತಾ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ

ದಾವಣಗೆರೆ.ನ.1; ನಗರದ 1ನೇ ವಾರ್ಡಿನಲ್ಲಿ ಕರ್ನಾಟಕ ಏಕತಾ ವೇದಿಕೆಯಿಂದ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿ.ಜಿ. ಅಜಯ್‍ಕುಮಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಎನ್.ಹೆಚ್. ಹಾಲೇಶ್‍ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 63ನೇ ಕನ್ನಡ ರಾಜ್ಯೋತ್ಸವದಲ್ಲಿ ಇದೇ ಮೊದಲ ರಾಜ್ಯೋತ್ಸವ ಆಗಿರುವುದು ಸಂತೋಷಕರವಾಗಿದೆ. ಇದು ವರ್ಷದ 365 ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಆಗದೆ ಕನ್ನಡ ನಿತ್ಯೋತ್ಸವ ಆಗಲೆಂದು ಆಶಿಸಿದರು. ದಾವಣಗೆರೆಯಲ್ಲಿ ಹಲವಾರು ಕನ್ನಡಪರ ಸಂಘಟನೆಗಳಿದ್ದು, ಕನ್ನಡ ನೆಲ, ಜಲ, ಭಾಷೆ ಉಳಿವಿಗಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದು ಕೇವಲ ಸಂಘಟನೆಗಳಿಗಷ್ಟೇ ಅಲ್ಲದೆ ರಾಜ್ಯದ ಪ್ರತಿಯೊಬ್ಬ ಕನ್ನಡಿಗರಿಗೂ ಕನ್ನಡದ ಉಳಿವಿಗಾಗಿ ಹೋರಾಡಬೇಕೆಂದು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿ.ಜಿ. ಅಜಯ್‍ಕುಮಾರ್‍ರವರು ಕರ್ನಾಟಕ ಏಕತಾ ವೇದಿಕೆಯು ಹಲವಾರು ವರ್ಷಗಳಿಂದ ಕನ್ನಡಪರ ಹೋರಾಟವನ್ನಲ್ಲದೆ ಹಲವಾರು ಸಮಸ್ಯೆಗಳಿಗೆ ಸಹಕಾರ ನೀಡುತ್ತಾ ಮಕ್ಕಳಿಗೆ ಪೆನ್ನು, ಪುಸ್ತಕ, ಉಚಿತ ಆರೋಗ್ಯ ಚಿಕಿತ್ಸೆ ನೀಡುತ್ತಾ ಹಾಗೂ ಸಮಾಜ ಸೇವೆ ಮಾಡುತ್ತಾ ಬಂದಿದೆ. ಇಂತಹ ಉದ್ದೇಶಗಳು ಇರುವಂತಹ ಸಂಘಟನೆಗಳು ಹೆಚ್ಚಾಗಿ ಬೆಳೆಯಲಿ ಎಂದು ಹೇಳುತ್ತಾ, ಕರ್ನಾಟಕದಲ್ಲಿ ಹಲವಾರು ಭಾಷೆಗಳಿದ್ದು ಅಂದರೆ ಕೊಂಕಣಿ , ತುಳುವ, ಕೊಡವ, ಲಂಬಾಣ , ಇಂತಹ ಹಲವಾರು ಭಾಷೆಗಳಿದ್ದು ಆದರೆ ಇವುಗಳಿಗೆ ಯಾವುದಕ್ಕೂ ಲಿಪಿ ಇರುವುದಿಲ್ಲ, ಕನ್ನಡಕ್ಕೆ ಮಾತ್ರ ಲಿಪಿ ಇರುತ್ತದೆ. ಅಂದರೆ ನಾವೇನನ್ನೂ ಮಾತನಾಡುತ್ತೇವೋ ಅದನ್ನೆ ಬರೆಯುವ ಅವಕಾಶ ಇರುವ ಅತೀ ಮುಖ್ಯ ಭಾಷೆ ಕನ್ನಡವಾಗಿದೆ. ನಾಲ್ಕು ಸಾವಿರ ವರ್ಷಗಳ ಇತಿಹಾಸವಿದ್ದು, ಇದನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಮಹತ್ವ ನೀಡಬೇಕೆಂದು ತಿಳಿಸಿದರು. ಅದೇ ರೀತಿ ಮಧ್ಯಮ ವರ್ಗದ ಜನಪರ ಉತ್ತಮ ಭವಿಷ್ಯಕ್ಕಾಗಿ ಕಾಳಜಿಯುಳ್ಳ ಕೆಲವು ಸಣ್ಣ ಪುಟ್ಟ ಕಥೆಗಳನ್ನು ಹೇಳುವ ಮುಖಾಂತರ ಈ ಸಂದರ್ಭದಲ್ಲಿ ಅರಿವು ಮೂಡಿಸಿದರು.
ಸಾಗರ್ ಎಲ್.ಎಂ.ಹೆಚ್. ಮಾತನಾಡಿ 1947ರಲ್ಲಿ ನಮಗೆ ಸ್ವಾತಂತ್ರ ಸಿಕ್ಕಂತಹ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಅಂದರೆ ಜಾತಿವಾರು, ಭಾಷಾವಾರು, ಪ್ರಾಂತ್ಯವಾರು ಇಂತಹ ಹಲವಾರು ಸಮಸ್ಯೆಗಳನ್ನು ಎದುರಿಸುವ ಸಂದರ್ಭದಲ್ಲಿ 1956ರಲ್ಲಿ ಆ ಪ್ರಾಂತ್ಯಗಳೆಂದು ವಿಂಗಡಣೆ ಮಾಡಲಾಯಿತು. ಅದಾದ ನಂತರ ಪ್ರಾಂತ್ಯಗಳಲ್ಲೂ ಕೂಡ ಮೈಸೂರು ಪ್ರಾಂತ್ಯ, ಚಿತ್ರದುರ್ಗ ಪ್ರಾಂತ್ಯ, ಹರಪನಹಳ್ಳಿ ಪ್ರಾಂತ್ಯ ಇಂತಹ ಹಲವಾರು ಪ್ರಾಂತ್ಯಗಳಾಗಿದ್ದು, 1973ರಲ್ಲಿ ದೇವರಾಜ್ ಅರಸುರವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವಾರು ಸಾಹಿತಿಗಳು ಒಗ್ಗೂಡಿ ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಈ ತರ ಹಲವಾರು ಹೋರಾಟಗಳನ್ನು ಮಾಡಿದ ನಂತರ ಕರ್ನಾಟಕವಾಯಿತು. ಆದ್ದರಿಂದ ತಾವುಗಳು ಕನ್ನಡಕ್ಕೆ ಹೆಚ್ಚಿನ ಮಹತ್ವವನ್ನು ಕೊಡಬೇಕೆಂದು ಈ ಮೂಲಕ ವ್ಯಕ್ತಪಡಿಸುತ್ತೇನೆ.
ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಿರಿ ಪ್ರಶಸ್ತಿ ವಿಜೇತರಾದ ಸಾಗರ್ ಎಲ್.ಎಂ.ಹೆಚ್., ಅಂತರ್‍ರಾಷ್ಟ್ರೀಯ ದೇಹದಾಢ್ಯ ಕ್ರೀಡಾಪಟು ಸತ್ಯನಾರಾಯಣ, ಮಂಜುನಾಥ್ ಡಿ., ಕಿಶೋರ್‍ಕುಮಾರ್ ಮತ್ತು ಸಿ.ಪಿ. ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ಕರ್ನಾಟಕ ಏಕತಾ ವೇದಿಕೆಯ ಕಾರ್ಯಕರ್ತರಾದ ಶಿವರಾಜ್, ಆದಿತ್ಯ, ಶಿವಕುಮಾರ್, ರಾಕೇಶ್, ರವಿಕುಮಾರ್ ಇನ್ನು ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

Leave a Comment