ಕರ್ನಾಟಕದಿಂದ ತಮಿಳುನಾಡಿಗೆ ಸರಾಗವಾಗಿ ಹರಿದ ಕಾವೇರಿ

ಮೈಸೂರು, ಆ.14: ತಡವಾದ ಮುಂಗಾರು ಮಳೆಯಿಂದಾಗಿ ಕಳೆದ ಎರಡು ತಿಂಗಳು ಬರ ಪರಿಸ್ಥಿತಿ ಎದುರಿಸಿದ್ದ ಕಾವೇರಿ ಕೊಳ್ಳ, ಈಗ ಮಳೆಯಿಂದ ತುಂಬಿದೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿನ ಕಾವೇರಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ ನೀರು ಹಂಚಿಕೆ ವಿವಾದ ಸದ್ಯಕ್ಕೆ ನೀರಿನಲ್ಲಿ ಕೊಚ್ಚಿ ಹೋಗಲಿದೆ.
ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಕರ್ನಾಟಕಕ್ಕೆ ಕಳೆದ ಸಭೆಯಲ್ಲಿ ನೆಮ್ಮದಿಯ ಸುದ್ದಿ ಕೊಟ್ಟಿತ್ತು. ಆದರೆ, ಜೂನ್ ಹಾಗೂ ಜುಲೈ ತಿಂಗಳುಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣದಲ್ಲಿ ಯಾವುದೆ ಬದಲಾವಣೆಯಾಗಿರಲಿಲ್ಲ.
ನಂತರ ನಡೆದ ಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಕಾವೇರಿ ಕಣಿವೆ ರಾಜ್ಯಗಳ ಪ್ರತಿನಿಧಿಗಳು ಲಭ್ಯ ನೀರಿನ ಪ್ರಮಾಣ, ಮಳೆ ಮುನ್ಸೂಚನೆ, ಬರ ಪರಿಸ್ಥಿತಿ, ಜಲ ನಿರ್ವಹಣೆ, ನೀರು ಹಂಚಿಕೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಿದ್ದರು. ಜಲಾಶಯಕ್ಕೆ ಒಳ ಹರಿವು ಅಧಿಕವಾದರೆ ತಮಿಳುನಾಡಿಗೆ ನಿಗದಿಯಂತೆ ನೀರು ಹರಿಸಬೇಕು, ತಕ್ಷಣವೇ ನೀರು ಬಿಡುವ ಒತ್ತಡ ಹೇರಿಲ್ಲದ ಕಾರಣ, ರಾಜ್ಯಕ್ಕೆ ಆತಂಕ ದೂರವಾಗಿತ್ತು.
ಈಗ ಮಳೆ ಬಂದಿದೆ, ಅಣೆಕಟ್ಟು ತುಂಬಿದೆ, ಕಬಿನಿ, ಕೆಆರ್ ಎಸ್ ನಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ. ಬಿಳಿಗುಂಡ್ಲು, ಎಚ್ ಡಿ ಕೋಟೆ, ಹೋಗೇನೆಕಲ್ ಮೂಲಕ ಕಾವೇರಿ ತಮಿಳುನಾಡು ಸೇರುತ್ತಿದ್ದಾಳೆ. ಕಳೆದ ಎರಡು ತಿಂಗಳು ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕಿದ್ದ ನೀರಿನ ಪ್ರಮಾಣ, ಆಗಸ್ಟ್ ಪಾಲು ಎಷ್ಟು? ಇನ್ನಷ್ಟು ವಿವರ ಮುಂದಿದೆ..
ಸುಪ್ರೀಂಕೋರ್ಟ್ ಅಂತಿಮ ಆದೇಶ:
ಕರ್ನಾಟಕದಿಂದ ತಮಿಳುನಾಡಿಗೆ ವಾರ್ಷಿಕವಾಗಿ 177 ಟಿಎಂಸಿ ಅಡಿ ಕಾವೇರಿ ಬಿಡಬೇಕು, ಆದರೆ, ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ರಾಜ್ಯವು ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು ಎನ್ನಲಾಗಿದೆ. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.ಆದರೆ, ಪ್ರಸ್ತಾವಿತ ಮೇಕೇದಾಟು ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಅವರಿಗೆ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಒಟ್ಟಾರೆ, ಕಾವೇರಿ ನೀರು ಹಂಚಿಕೆ ಅಂತಿಮ ತೀರ್ಪಿನಂತೆ ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ಇದರಲ್ಲ್ 4.75 ಟಿಎಂಸಿ ನೀರು ಬೆಂಗಳೂರಿನ ಕುಡಿಯುವ ನೀರಿಗೆ ಬಳಕೆ ಮಾಡಬಹುದು.
ಜೂನ್, ಜುಲೈ ತಿಂಗಳಿನ ಪ್ರಮಾಣ
ಜೂನ್ ತಿಂಗಳಿನಲ್ಲಿ 9.19 ಟಿಎಂಸಿ ಹಾಗೂ ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕಾಗಿತ್ತು. ಆಗ ಕೆಆರ್ ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ಒಟ್ಟು 14 ಟಿಎಂಸಿ ನೀರಿತ್ತು, ಬೆಂಗಳೂರಿಗೆ ಪ್ರತಿ ತಿಂಗಳಿಗೆ 4 ಟಿಎಂಸಿಯಷ್ಟು ಕುಡಿಯುವ ನೀರಿನ ಬೇಡಿಕೆ ಇರುವುದರಿಂದ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕಳೆದೆರಡು ತಿಂಗಳು ನೀರು ಹರಿಸಲು ಸಾಧ್ಯವಾಗಿರಲಿಲ್ಲ.
ಆಗಸ್ಟ್ ತಿಂಗಳಿನಲ್ಲಿ ಹರಿಸಬೇಕಾದ ಪ್ರಮಾಣ
45.95 ಟಿಎಂಸಿ ಅಡಿಯಷ್ಟು ಕಾವೇರಿ ನೀರು ಆಗಸ್ಟ್ ತಿಂಗಳಿನಲ್ಲಿ ಹರಿಸಬೇಕಾಗಿದೆ. ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯಿಂದಾಗಿ ಈಗಾಗಲೇ 35 ಟಿಎಂಸಿ ಅಡಿಯಷ್ಟು ನೀರು ಬಿಳಿಗುಂಡ್ಲುವಿನ ಮೂಲಕ ಹರಿದಿದೆ. ಕಬಿನಿಯಿಂದ ಈ ತಿಂಗಳು 32 ಟಿಎಂಸಿ ಅಡಿಯಷ್ಟು ನೀರು ಬಿಡಲಾಗಿದೆ. ಕನ್ನಂಬಾಡಿ ಕಟ್ಟೆಯಲ್ಲಿ 123 ಅಡಿಗಳಷ್ಟು ನೀರಿನ ಪ್ರಮಾಣವಿದ್ದು, ಅಣೆಕಟ್ಟು ಪೂರ್ಣ ತುಂಬಲು 1 ಅಡಿ ಮಾತ್ರ ಬಾಕಿಯಿದ್ದು, ದಿನಕ್ಕೆ 3 ಟಿಎಂಸಿಯಷ್ಟು ನೀರಿನ ಒಳ ಹರಿವು ಬರುತ್ತಿದೆ, ಕಳೆದ ಎರಡು ದಿನಗಳಿಂದ ಕಬಿಬಿ, ಕೆಆರ್ ಎಸ್ ನಿಂದ ಮೆಟ್ಟೂರ್ ಡ್ಯಾಂ ಸೇರಲು ಲಕ್ಷಾಂತರ ಕ್ಯೂಸೆಕ್ಸ್ ನೀರು ಸೇರಿದಂತೆ ಲೆಕ್ಕ ಹಾಕಿದರೆ, ತಿಂಗಳ ಅಂತ್ಯಕ್ಕೆ ತಮಿಳುನಾಡಿಗೆ ಅಗತ್ಯ ಪ್ರಮಾಣದಲ್ಲಿ ನೀರು ಹರಿಯಲಿದೆ.

Leave a Comment