ಕರ್ನಾಟಕಕ್ಕೆ ಕೇಂದ್ರದ ಮಲತಾಯಿ ಧೋರಣೆ; ಡಿ ಬಸವರಾಜ್ ಅಸಮಾಧಾನ

ದಾವಣಗೆರೆ.ಆ.13; ರಾಜ್ಯದಲ್ಲಿ ವಿಧಾಸಭೆ ಮತ್ತು ಲೋಕಸಭಾ ಚುನಾವಣೆ ಸಂದರ್ಭಗಳಲ್ಲಿ ಓಟಿಗಾಗಿ ಚುನಾವಣಾ ಪ್ರಚಾರಕ್ಕೆ ಮೂರು ದಿನಕ್ಕೊಮ್ಮೆ ಕರ್ನಾಟಕಕ್ಕೆ ಬರುತ್ತಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೀಗ ರಣಭೀಕರ ಮಳೆಗೆ ಇಡೀ ಕರ್ನಾಟಕ ರಾಜ್ಯವೇ ಮುಳಗಿ ಹೋಗಿದ್ದರೂ ಈಕಡೆ ಮುಖತೋರಿಸುತ್ತಿಲ್ಲ  ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ಡಿ. ಬಸವರಾಜ್ ಮೋದಿಯವರನ್ನು ಪ್ರಶ್ನಿಸಿದ್ದಾರೆ. ಮಲತಾಯಿ ಧೋರಣೆ ಬಿಟ್ಟು ತಕ್ಷಣ ರಾಜ್ಯಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಶತಮಾನದಲ್ಲಿಯೇ  ಕಂಡು ಕೇಳರಿಯದ ಭೀಕರ ಪ್ರವಾಹದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನ ಜನವಾರು ಸಂಕಷ್ಟದಲ್ಲಿದ್ದಾರೆ. ಇಡೀ ರಾಜ್ಯವೇ ಮುಳುಗಡಗೆ ಈಡಾಗಿರುವ ಭೀಕರ ಸಮಯದಲ್ಲಿ ಮೋದಿಯವರು ನಿರ್ಲಕ್ಷ ವಹಿಸಿರುವುದು ಅಕ್ಷಮ ಅಪರಾಧವೆಂದು ಟೀಕಿಸಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನು ಅರಿತು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಮಧ್ಯಾಂತರ ಪರಿಹಾರವಾಗಿ 5 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದ್ದು ಸರ್ಕಾರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಬಹುತೇಕ ನಾಶವಾಗಿದೆ
ರಾಜ್ಯದಿಂದ 4 ಕೇಂದ್ರ ಸಚಿವರು ಬಿಜೆಪಿಯವರೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದ್ದರೂ  ರಾಜ್ಯಕ್ಕೆ ಆಗಿರುವ ನಷ್ಟದ ವಾಸ್ತವ ಸತ್ಯವನ್ನು ಮೋದಿ ಮುಂದೆ ಹೇಳಲು ಹೆದರುತ್ತಿದ್ದಾರೆ. 10 ವರ್ಷಗಳ ಹಿಂದೆ 2009ರಲ್ಲಿ ರಾಜ್ಯದಲ್ಲಿ ಇದೇ ರೀತಿ ಜಲಪ್ರಳಯವಾದಾಗ ಅಂದಿನ ಪ್ರದಾನಮಂತ್ರಿ ಡಾ. ಮನಮೋಹನ್ ಸಿಂಗ್‍ರವರು, ಯುಪಿಎ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿಯವರು ಮತ್ತು ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂರವರು ರಾಜ್ಯಕ್ಕೆ ಭೇಟಿ ನೀಡಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಕರೆದುಕೊಂಡು ವೈಮಾನಿಕ ಸಮೀಕ್ಷೆ ನಡೆಸಿ 2ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದೀಗ ರಾಜ್ಯದಲ್ಲಿ ಅದಕ್ಕಿಂತಲೂ ಘೋರ ಬೀಕರ ಜಲಪ್ರಳಯವಾಗಿದ್ದು, ಪ್ರಧಾನಿ ಮೋದಿಯವರು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಮೋದಿಯ ಮಾತಿನ ಮೋಡಿಗೆ ಒಳಗಾದ ರಾಜ್ಯದ ಜನತೆ ಇಪ್ಪತ್ತೈದು ಸಂಸದರನ್ನು, 105 ಶಾಸಕರನ್ನು ಬಿಜೆಪಿಗೆ ಆಯ್ಕೆ ಮಾಡಿಕೊಟ್ಟರು ಈಗ ನೋಡಿದರೆ ಮೋದಿಯೂ ಇಲ್ಲ. ಸಂಸದರು ಮೋದಿ ಮುಂದಗಡೆ ಬಾಯಿ ಬಿಚ್ಚುತ್ತಿಲ್ಲ ಇಂತಹವರಿಂದ ರಾಜ್ಯಕ್ಕೆ ಪರಮ ಅನ್ಯಾಯವಾಗಿದೆ. ಮೋದಿಯವರು ಪ್ರಚಾರಕ್ಕಾಗಿ ಉತ್ತರಕಾಂಡ ರಾಜ್ಯಕ್ಕೆ ಹುಲಿಗಳಿರುವ ಕಾಡಿಗೆ ಭೇಟಿ ನಿಡುತ್ತಾರೆ. ರಾಜ್ಯಕ್ಕೆ ಭೇಟಿ ನೀಡಲು ಆಗುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

Leave a Comment