ಕರ್ತಾರಪುರ ಗುರುದ್ವಾರ: ಭಕ್ತರಿಗೆ ಶುಲ್ಕ ವಿಧಿಸುವ ಪಾಕ್‌ ಕ್ರಮಕ್ಕೆ ಭಾರತ ಖಂಡನೆ

 

ನವದೆಹಲಿ:ಅ.21. ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರ ಪ್ರವೇಶಿಸುವ ಸಿಖ್‌ ಯಾತ್ರಾರ್ಥಿಗಳಿಗೆ ಪಾಕಿಸ್ತಾನ ಸರ್ಕಾರ 1420 ಶುಲ್ಕ ವಿಧಿಸಲು ಮುಂದಾಗಿರುವುದನ್ನು ಕೇಂದ್ರ ಸಚಿವೆ ಹರ್‌ ಸಿಮ್ರಾತ್‌ ಕೌರ್‌ ಬಾದಲ್‌ ಖಂಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ವಿಡಿಯೊ ಹೇಳಿಕೆ ನೀಡಿರುವ ಅವರು ಪಾಕಿಸ್ತಾನ ಧಾರ್ಮಿಕ ನಂಬಿಕೆಗಳ ಮೇಲೆ ವ್ಯಾಪಾರ ಮಾಡಲು ಹೊರಟಿದೆ ಎಂದು ಟೀಕಿಸಿದ್ದು ಬಡ ಯಾತ್ರಾರ್ಥಿಗಳು ಈ ಮೊತ್ತವನ್ನು ಪಾವತಿಸುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಭಾರತದ ಸಿಖ್‌ ಯಾತ್ರಿಕರಿಗೆ ಪಾಕಿಸ್ತಾನ ವೀಸಾ ಇಲ್ಲದೆ ಕರ್ತಾರಪುರ ದರ್ಬಾರ್ ಸಾಹಿಬ್‌ಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಗುರುದ್ವಾರ ಪ್ರವೇಶಿಸುವ ಪ್ರತಿಯೊಬ್ಬ ಯಾತ್ರಾರ್ಥಿಯು 1420 ಪಾವತಿಸಬೇಕು, ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರೆಯುವುದಲ್ಲದೆ, ವಿದೇಶಿ ವಿನಿಮಯ ಹೆಚ್ಚಳಗೊಂಡು ಪಾಕ್‌ನ ಆರ್ಥಿಕತೆ ಬಲಗೊಳ್ಳಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಹೇಳಿದ್ದರು.

ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ ಹಣ ಸಂಗ್ರಹಿಸುವ ಪಾಕಿಸ್ತಾನದ ಯೋಚನೆ ನೀಚತನದಿಂದ ಕೂಡಿದೆ. ಪ್ರವೇಶ ಶುಲ್ಕದಿಂದ ಪಾಕಿಸ್ತಾನದ ಆರ್ಥಿಕತೆ ವೃದ್ಧಿಯಾಗಲಿದೆ ಎಂಬ ಇಮ್ರಾನ್‌ ಖಾನ್‌ ಹೇಳಿಕೆ ನಾಚಿಕೆಗೇಡಿನ ಸಂಗತಿ ಎಂದು ಹರ್‌ ಸಿಮ್ರಾತ್‌ ಕೌರ್‌ ಬಾದಲ್‌ ತಮ್ಮ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ತಾರಪುರ ಕಾರಿಡಾರ್‌ ಅನ್ನು ನವೆಂಬರ್‌ 8ರಂದು ಪ‍್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಪಂಜಾಬ್‌ನ ಗುರುದಾಸಪುರ ಡೇರಾ ಬಾಬಾ ನಾನಕ್‌ನಿಂದ ಪಾಕಿಸ್ತಾನದಲ್ಲಿರುವ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಈ ಕಾರಿಡಾರ್‌ ಸಂಪರ್ಕ ಕಲ್ಪಿಸಲಿದೆ.

Leave a Comment