ಕರ್ತಾಪುರ್ ಯಾತ್ರಿಕರಿಗೆ ಶುಲ್ಕ ಮನ್ನಾ

ಇಸ್ಲಾಮಾಬಾದ್, ನ. ೧- ಕರ್ತಾಪುರ್ ಯಾತ್ರಿಗಳಿಗೆ ಪಾಸ್‌ಪೋರ್ಟ್ ಹಾಗೂ ಶುಲ್ಕ ವಿಧಿಸುವ ಷರತ್ತನ್ನು ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಮನ್ನಾ ಮಾಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಈಗಾಗಲೇ ಕರ್ತಾಪುರ್ ಕಾರಿಡಾರ್ ಒಪ್ಪಂದ ಮಾಡಿಕೊಳ್ಳಲಾಗಿದ್ದು, ದರ್ಬಾರ್ ಸಾಹೀಬ್‌ನ್ನು ಪಂಜಾಬ್‌ನ ಗುರುದಾಸ್‌ಪುರ್ ಜಿಲ್ಲೆಯ ಡೇರಾಬಾಬಾ ನಾನಕ್ ದೇಗುಲದೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ ಮತ್ತು ಭಾರತೀಯ ಯಾತ್ರಿಕರಿಗೆ ವೀಸಾಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಪಾಕ್‌ನ ಈ ನಿರ್ಧಾರದಿಂದ ಕರ್ತಾಪುರ್ ಯಾತ್ರಿಗಳಿಗೆ ಅಂದಾಜು 20 ಡಾಲರ್ ಶುಲ್ಕ ನಿಷೇಧಗೊಳ್ಳಲಿದೆ.
ಕರ್ತಾಪುರ್ ತೀರ್ಥಯಾತ್ರೆಗೆ ಬರುವ ಸಿಖ್‌ರ 2 ಅವಶ್ಯಕತೆಗಳನ್ನು ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಇಂದು ಮನ್ನಾ ಮಾಡಿದ್ದಾರೆ ಹಾಗೂ ಯಾತ್ರಾರ್ಥಿಗಳಿಗೆ ರಿಯಾಯಿತಿ ಘೋಷಿಸಿರುವುದನ್ನು ಖಚಿತಪಡಿಸಿದ್ದಾರೆ.
ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಗತ್ಯವಿಲ್ಲ, ಕೇವಲ ಅಧಿಕೃತ ಗುರುತಿನ ಚೀಟಿ ಇದ್ದರೆ ಸಾಕು ಹಾಗೂ ಯಾತ್ರಾರ್ಥಿಗಳು 10 ದಿನಗಳ ಮುಂಚಿತವಾಗಿ ಅವರು ನೋಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ, ಉದ್ಘಾಟನಾ ದಿನ ಮತ್ತು ಗುರೂಜಿ ಅವರ 550ನೇ ಹುಟ್ಟುಹಬ್ಬದಂದು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಪ್ರಧಾನಿ ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಪಂಜಾಬ್‌ನ ಅಕಾಲಿದಳ್ ನಾಯಕ ಸುಕ್‌ಬೀರ್ ಬಾದಲ್, ಯಾತ್ರಾರ್ಥಿಗಳಿಗೆ ಶುಲ್ಕ ವಿಧಿಸುವುದನ್ನು ಆದಾಯದ ಮೂಲವಾಗಿ ಪರಿಗಣಿಸಬಾರದು. ಯಾತ್ರಿಗಳಿಗೆ ಕರ್ತಾಪುರ್‌ಗೆ ತೆರಳಲು ಉಚಿತ ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಧಾನಿ ಇಮ್ರಾನ್‌‌ಗೆ ಮನವಿ ಮಾಡಿದ್ದರು. ಇದೇ ತಿಂಗಳ ನ. 9 ರಂದು ಕರ್ತಾಪುರ್ ಕಾರಿಡಾರ್ ಉದ್ಘಾಟನೆಗೊಳ್ಳಲಿದೆ. ಇದಕ್ಕೂ ಮೊದಲು ಕರ್ತಾಪುರ್ ಕಾರಿಡಾರ್‌ ಒಪ್ಪಂದಕ್ಕೆ ಭಾರತ ಮತ್ತು ಪಾಕ್ ಸಹಿ ಹಾಕಿದೆ.

Leave a Comment