ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ

ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
ತಿ.ನರಸೀಪುರ ಫೆ.7- ತಾಲೂಕಿನ ರಾಮನಾಥಪುರದಹುಂಡಿ ಗ್ರಾಮದಲ್ಲಿ ಕರ್ತವ್ಯನಿರತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ ಅವರ ಮೇಲೆ ಹಲ್ಲೆ ಮಾಡಿರುವ ಘಟನೆ ಖಂಡಿಸಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೌಕರರು ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿದರು. ಪೊಲೀಸರು ಕೂಡಲೇ ಮೂವರು ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಕಚೇರಿ ಮುಂಭಾಗ ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ಶಿರಸ್ತೇದಾರ್ ಪ್ರಭುರಾಜ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ ಬಳಿಕ ಮತ್ತೆ ತಾಲೂಕು ಪಂಚಾಯಿತಿ ಮುಂಬಾಗಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ಕಾರ್ಯನಿರ್ವಾಹಕ ಅಧಿಕಾರಿ ಎಂ. ಜೆರಾಲ್ಡ್ ರಾಜೇಶ್ ಅವರಿಗೂ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಜೆರಾಲ್ಡ್ ರಾಜೇಶ್ ಮಾತನಾಡಿ, ಕಾಮೆಡಿ ಕೆಲಸ ನಿರ್ವಹಿಸುವ ಯಾವೊಬ್ಬ ಸರ್ಕಾರಿ ಅಧಿಕಾರಿ ಹಾಗೂ ನೌಕರರು ಭಯಪಡುವ ಅಗತ್ಯವಿಲ್ಲ. ಕಾನೂನು ನಾವು ಕಾಪಾಡಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ. ಪಿಡಿಒ ಮೇಲಿನ ಹಲ್ಲೆ ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ. ಘಟನೆ ಬಗ್ಗೆ ಜಿ.ಪಂ ಸಿಇಓ ಅವರ ಗಮನಕ್ಕೆ ತಂದಿದ್ದು, ಪೊಲೀಸರ ಎಫ್‍ಐಆರ್ ಪ್ರತಿಯನ್ನು ಸಲ್ಲಿಸಲಾಗಿದೆ. ಇಲಾಖೆಯ ಉನ್ನತಾಧಿಕಾರಿಗಳು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆರೋಪಿಗಳನ್ನು ಬಂಧಿಸುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ನೌಕರರು ಯಾವುದೇ ಭಯ ಆತಂಕವಿಲ್ಲದೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ನೌಕರರ ಹೋರಾಟವನ್ನು ಬೆಂಬಲಿಸಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ ಪ್ರತಿಭಟನೆಗೆ ಸಾಥ್ ನೀಡಿದ್ದರು. ಪ್ರತಿಭಟನೆಯಲ್ಲಿ ಪಿಡಿಓಗಳ ಹಾಗೂ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಸೌಮ್ಯಲತಾ, ಅಧಿಕಾರಿಗಳಾದ ಕೆಂಚೇಗೌಡ, ರಾಜಣ್ಣ, ಮಹೇಶ, ನಾಗರಾಜು, ಸೋಮಣ್ಣ, ಲಿಂಗರಾಜು, ಮಾದೇಶ, ಬಸವಯ್ಯ ಸೇರಿದಂತೆ ಗ್ರಾಮ ಪಂಚಾಯ್ತಿಗಳ ಪಿಡಿಓ ಗಳಾದ ಕೆ, ಸಿ, ಸುರೇಶ್, ಟಿ, ಎಂ, ಮಹೇಶ್, ಮಾದೇಶ್, ನೇತ್ರಾವತಿ, ಚಿಕ್ಕತಾಯಮ್ಮ, ಮೀನಾಕ್ಷಿ, ಸಂತೋಷ್ ಕುಮಾರ್, ಪಿ ಶೈಲಜಾ, ಕೆಂಪೇಗೌಡ, ಅಶೋಕ್, ಲಿಂಗರಾಜು, ಧರಣೇಶ, ನೌಕರರು ಭಾಗವಹಿಸಿದ್ದರು.

Leave a Comment