ಕರುಳಿನ ಉರಿಗೆ ಮನೆ ಮದ್ದು ಪರಿಹಾರ

ಪ್ರತಿಯೊಂದು ಖಾಯಿಲೆಗೂ ನಮ್ಮ ಜೀವನ ಶೈಲಿಗೂ ಸಂಬಂಧ ಇದ್ದೇ ಇರುತ್ತದೆ. ಸಕಾಲಕ್ಕೆ ಊಟ, ತಿಂಡಿ ಸೇವಿಸದೆ, ನಿದ್ರೆ ಮಾಡದೆ ಇರುವುದೇ ಸಮಸ್ಯೆಗಳಿಗೆ ಮೂಲ ಕಾರಣವಾಗಲಿದೆ. ಕರುಳಿನ ಉರಿ, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳನ್ನು ತಂದೊಡ್ಡಲಿದೆ. ಕರುಳಿನ ಉರಿ, ಸಾಮಾನ್ಯವಾಗಿ ಕೆಲವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಇದಕ್ಕೆ ಮನೆ ಮದ್ದುಗಳೂ ಪರಿಹಾರ ನೀಡಬಲ್ಲವು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಕಂಡಾಗ, ವೈದ್ಯರ ಬಳಿ ಹೋಗುವುದು ಅನಿವಾರ್ಯ.

ದೊಡ್ಡ ಕರುಳು ಮತ್ತು ಗುದನಾಳದ ಒಳಭಾಗದಲ್ಲಿ ಉಂಟಾಗುವ ಉರಿಯೂತದಿಂದ ಕರುಳಿನ ಉರಿ ಬಾಧೆ ಉಂಟಾಗಲಿದೆ. ಈ ಭಾಗ ನಮ್ಮ ಜೀರ್ಣಾಂಗ ವ್ಯವಸ್ಥೆಯ ಕೊನೆ ಹಂತವಾಗಿದ್ದು ಅದರಲ್ಲಿ ಎಡವಟ್ಟಾದಾಗ ಇಂತಹ ತೊಂದರೆ ಕಾಣಿಸಲಿದೆ.

ಈ ಭಾಗದಲ್ಲಿ ಆಹಾರದಿಂದ ನೀರನ್ನು ಹೀರಿಕೊಂಡು ತ್ಯಾಜ್ಯಗಳನ್ನು ಸುಲಭವಾಗಿ ವಿಸರ್ಜಿಸಲು ಸಾಧ್ಯವಾಗುವಂತೆ ಒಳಭಾಗದ ಪದರದಲ್ಲಿ ಲೋಳೆಯಂತಹ ದ್ರವ ಅಂಟಿಕೊಂಡಿರುತ್ತದೆ. ಈ ದ್ರವದ ಉತ್ಪತ್ತಿ ಕಡಿಮೆಯಾದರೆ ಅಥವಾ ಇಲ್ಲದೇ ಹೋದಾಗ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ.

ಇದರ ಪರಿಣಾಮವಾಗಿ ಅತಿಸಾರ ಹಾಗೂ ನೋವು ಸಹ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಎದುರಾಗುವುದು ತೀರಾ ವಿರಳವಾದರೂ, ಕೆಲವರನ್ನು ಪದೇ ಪದೇ ಕಾಡುವುದೂ ಉಂಟು.

ಮೊಸರು ಸೇವಿಸಿ
ಕರುಳಿನ ಉರಿಯನ್ನು ನಿವಾರಿಸಲು ಮೊಸರು ಅತ್ಯುತ್ತಮ ಪರಿಹಾರ ಮಾರ್ಗವಾಗಿ ಕಾಣಸಿಗುತ್ತದೆ. ಮೊಸರಿನಲ್ಲಿ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ಸಹಾಯ ಮಾಡುವ ಬ್ಯಾಕ್ಟೀರಿಯಾಗಳು ಇರುತ್ತವೆ. ಜೀರ್ಣಕ್ರಿಯೆ ಸ್ನೇಹಿ ಬ್ಯಾಕ್ಟೀರಿಯಾಗಳು ಕರುಳಿನ ಒಳಗೆ ಪ್ರಕ್ರಿಯೆ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿರಿಸಲು ನೆರವಾಗುತ್ತವೆ. ಈ ಬ್ಯಾಕ್ಟೀರಿಯಾಗಳು ಜೀರ್ಣಾಂಗಗಳಲ್ಲಿ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿ ಮಾಡಿ, ಜಠರ ಕರುಳುಗಳಿಂದ ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ಸಹಕಾರಿಯಾಗುತ್ತವೆ.

ಪ್ರತಿದಿನ ಒಂದು ಕಪ್ ಮೊಸರನ್ನು ಸೇವಿಸಿದರೆ ಕರುಳಿನ ಉರಿ ಸಮಸ್ಯೆಯಿಂದ ಪಾರಾಗಬಹುದಾಗಿದೆ. ಅದೇ ರೀತಿ ನಿತ್ಯದ ಆಹಾರ ಸೇವನೆ ಸಂದರ್ಭದಲ್ಲಿ ಹಣ್ಣು, ಹಸಿ ತರಕಾರಿಗಳನ್ನು ಹೆಚ್ಚಾಗಿ ಉಪಯೋಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಾಳೆಹಣ್ಣು, ಸಕ್ಕರೆ ಸೇರಿಸಿ ತಯಾರಿಸುವ ರಸಾಯನಗಳಲ್ಲಿ ಮೊಸರು ಸೇರಿಸಿ ಸೇವನೆ ಮಾಡಬೇಕು.

ಆಲೂಗಡ್ಡೆ ರಸ ಕೂಡಾ, ಇಂತಹ ಸಮಸ್ಯೆಗೆ ಪರಿಹಾರ ದೊರಕಿಸಬಲ್ಲದು. ಆಲೂಗಡ್ಡೆ ಕ್ಷಾರೀಯವಾಗಿದ್ದು, ಕರುಳಿನ ಉರಿಗೆ ಕಾರಣವಾಗುವ ಆಮ್ಲೀಯತೆಯನ್ನು ನಿಷ್ಕ್ರಿಯ ಗೊಳಿಸುವ ಕ್ಷಮತೆ ಹೊಂದಿದೆ. ವಿಶೇಷವಾಗಿ ಅತಿಸಾರ ಹಾಗೂ ಕರುಳಿನ ಹುಣ್ಣು ಆದರೆ ಈ ರಸ ಅತ್ಯುತ್ತಮ ಪರಿಹಾರ ಒದಗಿಸಲಿದೆ.

ಅನ್ನದ ಗಂಜಿ
ಒಂದು ಹಿಡಿ ಅಕ್ಕಿಯನ್ನು ನೀರಿನಲ್ಲಿ ಬೇಯಿಸಿ ಅಕ್ಕಿ ಬೆಂದ ನಂತರ ಅದರಲ್ಲಿನ ನೀರನ್ನು ತಣ್ಣಗಾಗುವವವರೆಗಿದ್ದು, ಸೋಸಿ ನೀರಿನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅಂತಹ ನೀರನ್ನು ದಿನಕ್ಕೆ ಒಂದೆರಡು ಬಾರಿ ಕುಡಿದರೆ, ಕರುಳಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ಒಂದೆರಡು ಕ್ಯಾರೆಟ್‌ಗಳನ್ನು ತುರಿದು ಹಿಂಡಿ, ಸಂಗ್ರಹಿಸಿಟ್ಟುಕೊಂಡು ಕುಡಿಯುವುದರಿಂದ ತೊಂದರೆ ಪರಿಹಾರವಾಗಲಿದೆ. ಒಂದೆರಡು ಕ್ಯಾರೆಟ್‌ಗಳನ್ನು ನೀರಿಗೆ ಉಪ್ಪು ಹಾಕದೆ ಕುದಿಸಿ, ಬಳಿಕ ಅದನ್ನು ಜಜ್ಜಿ, ರಸ ಉತ್ಪಾದಿಸಿ ಕುಡಿಯುವುದರಿಂದ ಉರಿಯೂತ ದೂರವಾಗಲಿದೆ.

ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಹಾಗೂ ಒಂದು ಚಮಚದಷ್ಟು ಜೇನುತುಪ್ಪ ಸೇರಿಸಿ ದಿನಕ್ಕೊಮ್ಮೆ ಸೇವಿಸಬೇಕು. ಬಾಳೆಹಣ್ಣಿನಿಂದ ತಯಾರಿಸಿದ ರಸಾಯನ ಸಹ ಪರಿಹಾರ ಒದಗಿಸಲಿದೆ.

Leave a Comment