ಕರಾವಳಿ ಪ್ರಕ್ಷುಬ್ಧ: ಎಸ್.ಡಿ.ಪಿ.ಐ ಪ್ರತಿಭಟನೆ

ಮೈಸೂರು, ಜು. 17- ಕರಾವಳಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸುಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಕಾರ್ಯಕರ್ತರು ಉದಯಗಿರಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಇಬ್ಬರು ಅಮಾಯಕರ ಕೊಲೆ ಹಾಗೂ 12 ಚೂರಿ ಇರಿತ ಪ್ರಕರಣಗಳು ನಡೆದಿದೆ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಸೆಕ್ಷನ್ 144 ಜಾರಿಯಲ್ಲಿದ್ದರೂ ಶರತ್ ಕೊಲೆಯನ್ನು ಖಂಡಿಸುವ ನೆಪದಲ್ಲಿ ಬಿಜೆಪಿ ಸಂಸದರಾದ ಶೋಭಾ ಮತ್ತು ನಳಿನ್ ಕುಮಾರ್ ನೇತೃತ್ವದಲ್ಲಿ ಬಿ.ಸಿ.ರೋಡ್ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿ ವಾತಾವರಣ ಮತ್ತಷ್ಟು ಪ್ರಕ್ಷುಬ್ಧವಾಗುವಂತೆ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದರು.
ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಬಿಜೆಪಿ ಸಂಸದರು ಕೊಲೆಯ ಆರೋಪವನ್ನು ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆಯ ಮೇಲೆ ಹೊರಿಸಲು ಹೊರಟಿರುವುದು ಸರಿಯಲ್ಲ. ಇದು ಪೊಲೀಸರ ದಿಕ್ಕುತಪ್ಪಿಸುವ ಹುನ್ನಾರವಾಗಿದೆ. ಸೂತಕದ ಮನೆಯಲ್ಲಿ ರಾಜಕೀಯ ಮಾಡುತ್ತಿರುವ ರಾಜಕಾರಣಿಗಳನ್ನು ಕಾನೂನಿನ ಅಡಿಯಲ್ಲಿ ತರುವವರೆಗೂ ಇಲ್ಲಿ ಕೋಮು, ದ್ವೇಷಗಳು ಕೊನೆಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಲೋಕಸಭಾ ಸಭಾಪತಿಯವರು, ರಾಷ್ಟ್ರೀಯ ಚುನಾವಣಾ ಆಯೋಗ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಕೋಮು ಪ್ರಚೋದನೆ ಹಾಗೂ ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿರುವ ಬಿಜೆಪಿ ಸಂಸದರು, ಶಾಸಕರು, ಸಂಘಪರಿವಾರದ ನಾಯಕರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಎಸ್.ಡಿ.ಪಿ.ಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾದ ರಾಜ್ಯ ಖಜಾಂಚಿ ಮೊಹಮ್ಮದ್ ಫಾರೂಕ್, ಪಿ.ಎಫ್.ಐ ಜಿಲ್ಲಾಧ್ಯಕ್ಷ ಅಮೀನ್ ಸೇಠ್, ಎಸ್.ಡಿ.ಟಿ.ಯು ಮುಖಂಡ ಆಲೂರು ಮಲ್ಲಣ್ಣ ಇತರರು ಹಾಜರಿದ್ದರು.

Leave a Comment