‘ಕರಾವಳಿ ಗೌರವ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಆಯ್ಕೆ

ಮಂಗಳೂರು, ಜ 18- ಪ್ರಸಕ್ತ ಸಾಲಿನ ‘ಕರಾವಳಿ ಗೌರವ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಉದಯವಾಣಿ ದೈನಿಕ ಸಹಾಯಕ ಸಂಪಾದಕರಾದ ಮನೋಹರ್ ಪ್ರಸಾದ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಸಮಿತಿ ಆಯ್ಕೆ ಮಾಡಿದೆ.

ಪತ್ರಿಕೋದ್ಯಮಕ್ಕೆ ಸಲ್ಲಿಸಿದ ವಿಶಿಷ್ಟ ಕೊಡುಗೆಗಾಗಿ ಮನೋಹರ್ ಪ್ರಸಾದ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜ 19ರಂದು(ಭಾನುವಾರ) ಪಣಂಬೂರು ಕಡಲ ತೀರದಲ್ಲಿ ನಡೆಯುವ ಕರಾವಳಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪತ್ರಿಕೋದ್ಯಮದಲ್ಲಿ ಖ್ಯಾತರಾಗಿರುವ ಮನೋಹರ್ ಪ್ರಸಾದ್ ಅವರಿಗೆ 2005ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇದಲ್ಲದೆ ಹತ್ತಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. 1984ರಲ್ಲಿ ಉದಯವಾಣಿ ಪತ್ರಿಕೆಗೆ ವರದಿಗಾರರಾಗಿ ಸೇರಿದ್ದ ಅವರು ಸದ್ಯ ಮಂಗಳೂರಿನಲ್ಲಿ ಅದೇ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

Leave a Comment