ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

ಮಂಗಳೂರು, ಜೂ.೫- ಕರಾವಳಿಯಲ್ಲೆಡೆ ಇಂದು ಸಂಭ್ರಮದ ಈದ್-ಉಲ್-ಫಿತ್ರ್ ಅನ್ನು ಮುಸ್ಲಿಂ ಸಮುದಾಯದವರು ಭಕ್ತಿ-ಭಾವದಿಂದ ಆಚರಣೆ ಮಾಡಿದರು. ಒಂದು ತಿಂಗಳ ಕಾಲ ಪವಿತ್ರ ರಂಜಾನ್ ಉಪವಾಸ ವೃತ ಪೂರೈಸಿರುವ ಮುಸ್ಲಿಂ ಬಾಂಧವರು ಇಂದು ಬೆಳಿಗ್ಗೆಯೇ ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭ ಕೋರಿದರು. ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಬೆಳಗ್ಗೆ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು. ಪವಿತ್ರ ರಮ್ಜಾನ್ ತಿಂಗಳ ೩೦ ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡುತ್ತಾ, ಯಾವುದೇ ಕೆಡುಕಿಗೆ ಆಸ್ಪದ ನೀಡದ ಮುಸ್ಲಿಮರು, ಸಾಕಷ್ಟು ಒಳಿತಿನ, ಪುಣ್ಯದ ಕಾರ್ಯಗಳನ್ನು ಮಾಡಿದ್ದಾರೆ. ಅದರ ಸಂತೋಷದಲ್ಲಿ ಈದುಲ್ ಫಿತ್ರ್ ಆಚರಿಸುತ್ತಿದ್ದಾರೆ ಎಂದು ಖಾಝಿ ಹೇಳಿದರು. ಮಾನಸಿಕ ಮಾಲಿನ್ಯದ ಶುದ್ಧಿಯ ಬಳಿಕ ದೈಹಿಕವಾಗಿ ಶುದ್ಧಿಗೊಂಡು, ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಸುಗಂಧ ಹರಡಿಕೊಂಡು, ಲಘು ಸಿಹಿ ತಿಂಡಿ ಸೇವಿಸಿ, ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ, ಪ್ರವಚನದಲ್ಲಿ ಭಾಗವಹಿಸುವುದು ಹಬ್ಬದ ದಿನಚರಿ. ತಮ್ಮ ಸಂತೋಷದ ಜತೆ ಬಡವರಿಗೆ ದಾನ, ಧರ್ಮದ ಮೂಲಕ ಹಬ್ಬ ಆಚರಿಸುವಂತೆ ಮಾಡುವುದು ಹಬ್ಬದ ವೈಶಿಷ್ಟ್ಯ ಎಂದರು.
ಬಹಳ ಅಪರೂಪವಾಗಿ ರಾಜ್ಯದೆಲ್ಲೆಡೆ ಇಂದು ಒಂದೇ ದಿನ ಈದ್-ಉಲ್ ಫಿತ್ರ್ ಅನ್ನು ಆಚರಣೆ ಮಾಡಲಾಗುತ್ತಿದೆ. ನಿನ್ನೆ ರಾತ್ರಿ ಚಂದ್ರನ ದರ್ಶನವೂ ರಾಜ್ಯದೆಲ್ಲೆಡೆ ಒಂದೇ ಬಾರಿ ಆಗಿದ್ದರಿಂದ ಇಂದು ಎಲ್ಲೆಡೆ ಒಟ್ಟಿಗೆ ಆಚರಣೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಕರಾವಳಿಯ ಮುಸ್ಲಿಮರು ಕೇರಳದವರೊಂದಿಗೆ ಒಂದು ದಿನ ಮುಂಚಿತವಾಗಿ ರಂಜಾನ್ ಆಚರಿಸುತ್ತಿದ್ದರು. ಆದರೆ ಈ ಬಾರಿ ಚಂದ್ರ ದರ್ಶನದಿಂದಾಗಿ ಒಂದೇ ದಿನ ರಾಜ್ಯದೆಲ್ಲೆಡೆ ರಂಜಾನ್ ಆಚರಿಸುವಂತಾಗಿದೆ. ಶಾಹ ಅಮೀರ್ ಅಲಿ ಮಸೀದಿಯ ಇಮಾಮ್ ಮೌಲಾನ ರಿಯಾಝುಲ್ ಹಖ್ ಈದ್ ನಮಾಝ್ ಬಗ್ಗೆ ಮಾಹಿತಿ ನೀಡಿದರು. ಈದ್ ನಮಾಝ್ ಬಳಿಕ ಮಸೀದಿ ಆವರಣದಲ್ಲಿ ಸರ್ವಧರ್ಮೀಯ ಗಣ್ಯರ ಸಮ್ಮುಖದಲ್ಲಿ ಸೌಹಾರ್ದ ಸಭೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮಸ್ಜಿದ್ ಝೀನತ್ ಬಕ್ಷ್ ಅಧ್ಯಕ್ಷ ವೈ.ಅಬ್ದುಲ್ಲ ಕುಂಞಿ ಹಬ್ಬದ ಸಂದೇಶ ನೀಡಿದರು. ಮಾಜಿ ಶಾಸಕ ಜೆ.ಆರ್.ಲೋಬೊ, ಸಂತ ಅಲೋಶಿಯಸ್ ಕಾಲೇಜು ಪ್ರಿನ್ಸಿಪಾಲ್ ಫಾದರ್ ಪ್ರವೀಣ್ ಮಾರ್ಟಿಸ್, ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಡಿಸಿಪಿ ಹನುಮಂತರಾಯ ಉಪಸ್ಥಿತರಿದ್ದರು.

Leave a Comment