ಕರಾಚಿಯಲ್ಲಿ ಗುಂಡಿನ ಚಕಮಕಿ: ಮೂವರು ಅಲ್ ಖೈದಾ ಉಗ್ರರ ಸಾವು

ಇಸ್ಲಾಮಾಬಾದ್, ಜೂ 25 – ಪಾಕಿಸ್ತಾನದ ದಕ್ಷಿಣ ಬಂದರು ನಗರ ಕರಾಚಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಲ್‌ ಖೈದಾ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಪೊಲೀಸರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಕರಾಚಿಯ ಖುದಾ ಬಕ್ಸ್ ಗೋತ್‌ ಪ್ರದೇಶದಲ್ಲಿ ಪೊಲೀಸರು ಮತ್ತು ಗುಪ್ತಚರ ಏಜೆನ್ಸಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಇರ್ಫಾನ್ ಅಲಿ ಬಹದೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನುಬಂಧಿಸಲು ಸ್ಥಳಕ್ಕೆ ಪೊಲೀಸರು ತೆರಳಿದಾಗ ಅವರು ಶರಣಾಗಲು ನಿರಾಕರಿಸಿ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡು ಹಾರಿಸಿದಾಗ ಮೂವರು ಕೊಲ್ಲಲ್ಪಟ್ಟರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ
ಉಗ್ರರ ಗುರುತು ಪತ್ತೆಯಾದ ಬಳಿಕ ಸಂಪೂರ್ಣ ಮಾಹಿತಿ ಒದಗಿಸಲಾಗುವುದು. ಇದೇ ವೇಳೆ ಕತ್ತಲಲ್ಲಿ ಮೂವರು ಉಗ್ರರು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
10 ಕೆಜಿ ಸ್ಫೋಟಕಗಳಿದ್ದ ಆತ್ಮಹತ್ಯಾ ಜಾಕೆಟ್, ಸ್ವಯಂ ಚಾಲಿನ ಬಂದೂಕು, ಜೀವಂತ ಗುಂಡುಗಳು, ಒಂದು ಪಿಸ್ತೂಲ್, ಕೈಗ್ರೆನೇಡ್, ದೂರನಿಯಂತ್ರಿತ ಸರ್ಕ್ಯೂಟ್, ಡಿಟೋನೇಟರ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹತರಾದವರು ಅಲ್ ಖೈದಾ ನಿಷೇಧಿತ ಸಂಘಟನೆಯ ಉಗ್ರರು ಎಂದು ತಿಳಿದುಬಂದಿದೆ. ಇವರು ಪಾಕಿಸ್ತಾನದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಭದ್ರತಾ ಸಿಬ್ಬಂದಿಯ ಹತ್ಯೆ, ಅಲ್ಪಸಂಖ್ಯಾತ ಸಮುದಾಯದ ಜನರು, ವಿದೇಶಿಯರ ಅಪಹರಣ ಮುಂತಾದ ಕೃತ್ಯಗಳಲ್ಲಿ ಭಾಗಿಯಾದವರಾಗಿದ್ದಾರೆ. ತಪ್ಪಿಸಿಕೊಂಡ ಉಗ್ರರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Comment