ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹಿಸಲು ಗೋ ಸ್ವದೇಶಿ ಆನ್‌ಲೈನ್ ಪ್ರದರ್ಶನ

ಕರಕುಶಕಲರ್ಮಿಗಳು ಹಾಗೂ ನೇಯ್ಗೆದಾರರಿಗಾಗಿಯೇ ಸ್ಥಾಪನೆಯಾಗಿರುವ ಭಾರತದ ಮೊಟ್ಟಮೊದಲ ಆನ್‌ಲೈನ್ ಮಾರ್ಕೆಟ್ ತಾಣ ಗೋಕೂಪ್, ಮೇ 21ರಿಂದ ಮೇ 27ರವರೆಗೆ ಆನ್‌ಲೈನ್ ಮೂಲಕ ತನ್ನ ಉತ್ಪನ್ನಗಳ ಪ್ರದರ್ಶನವನ್ನು ಆಯೋಜಿಸಿದೆ. ನಾನಾ ಶ್ರೇಣಿಯ, ದೇಶದ ಮೂಲೆಮೂಲೆಯ ತಯಾರಕರು ಸಿದ್ಧಪಡಿಸಿರುವ ವಿಶಿಷ್ಟ ಹಾಗೂ ವಿಶ್ವಾಸಾರ್ಹ ಕೈ ಮಗ್ಗದ ಸೀರೆಗಳು, ಬಟ್ಟೆಗಳು, ಡ್ರೆಸ್ ಮೆಟೀರಿಯಲ್‌ಗಳು, ಸ್ಟೋಲ್‌ಗಳು, ದುಪ್ಪಟ್ಟಾಗಳು, ಪುರುಷರ ಉಡುಪುಗಳು ಹಾಗೂ ಗೃಹಾಲಂಕಾರದ ವಸ್ತುಗಳು ಈ ಆನ್‌ಲೈನ್ ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ. ಏಳು ದಿನಗಳ ಕಾಲ ನಡೆಯುವ ಈ ಪ್ರದರ್ಶನವನ್ನು ದೇಶದ ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದು, ವೋಕಲ್ ಫಾರ್ ಲೋಕಲ್ ಅಭಿಯಾನದ ಭಾಗವಾಗಿ ನಡೆಯಲಿದೆ. ಇದರ ಮೂಲಕ ನಮ್ಮ ದೇಶದ ಸಾಂಪ್ರದಾಯಿಕ ಕೈಮಗ್ಗಕ್ಕೆ ಮನ್ನಣೆ ದೊರಕಿಸಿಕೊಡುವ ಉದ್ದೇಶವೂ ಇದೆ.

go-swadeshi-online_1

ಕೋವಿಡ್-೧೯ ವೈರಸ್ ಹರಡುವಿಕೆ ಹೆಚ್ಚಳವಾದ ಬಳಿಕ ಘೋಷಿಸಲಾದ ಲಾಕ್‌ಡೌನ್‌ನಿಂದಾಗಿ ಸರಕುಗಳ ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಿದ್ದಲ್ಲದೆ, ಜಾಗತಿಕ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಪ್ರಮುಖವಾಗಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಹೆಚ್ಚು ಹಾನಿಯಾಗಿದೆ. ಈ ಲಾಕ್‌ಡೌನ್ ಸುಮಾರು ೧೦ ದಶಲಕ್ಷದಷ್ಟು ಕರಕುಶಲ ಕರ್ಮಿಗಳು ಹಾಗೂ ನೇಯ್ಗೆದಾರರ ಮೇಲೆ ಪರಿಣಾಮ ಬೀರಿದೆ. ಅವರು ತಯಾರಿಸಿರುವ ಉತ್ಪನ್ನಗಳು ಮಾರಾಟವಾಗದೇ ಉಳಿದ ಕಾರಣ ಅವರ ದೈನಂದಿನ ಅಗತ್ಯಗಳಿಗೂ ಕೊರತೆ ಉಂಟಾಗಿದೆ. ಹೀಗಾಗಿ ಗೋ ಸ್ವದೇಶಿ ಆನ್‌ಲೈನ್ ಪ್ರದರ್ಶನವನ್ನು ಆಯೋಜಿಸಿರುವ ಗೋಕೂಪ್, ದೇಶದ ಕರಕುಶಲಕರ್ಮಿಗಳಲ್ಲಿ ಮಾರಾಟವಾಗದೇ ಉಳಿದುಕೊಂಡಿರುವ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ, ಕೋವಿಡ್-೧೯ನಿಂದ ಆದ ಆಘಾತದಿಂದ ಹೊರತರಲು ಯತ್ನಿಸುತ್ತಿದೆ.

go-swadeshi-online_6

ಕೈಮಗ್ಗದ ಹಾಗೂ ಕರಕುಶಲ ವಸ್ತುಗಳ ಬಗ್ಗೆ ಅಭಿಮಾನ ಉಳ್ಳವರು ಈ ಗೋಸ್ವದೇಶಿ ಆನ್‌ಲೈನ್ ಮಾರಾಟ ಮೇಳದಲ್ಲಿ ಪಾಲ್ಗೊಳ್ಳುವ ಮೂಲಕ ಹೊಚ್ಚ ಹೊಸ ವಿಭಿನ್ನ ನೇಯ್ಗೆಯ ವಸ್ತುಗಳನ್ನು ತಮ್ಮದಾಗಿಸಿಕೊಳ್ಳಬಹುದು. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ್, ಛತ್ತಿಸ್‌ಗಢ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕರಕುಶಲ ಕರ್ಮಿಗಳು ಹಾಗೂ ನೇಯ್ಗೆದಾರರು ತಯಾರಿಸಿರುವ ಸಾಂಪ್ರದಾಯಿಕ ಹಾಗೂ ಸಮಕಾಲಿನ ಶೈಲಿಯ ಉಡುಪುಗಳ ಸಂಗ್ರಹವನ್ನು ತಮ್ಮದಾಗಿಸಿಕೊಳ್ಳಲು ಇದು ಸುವರ್ಣಾವಕಾಶವಾಗಿದೆ. ಆಂಧ್ರಪ್ರದೇಶದ ಉಪ್ಪಡ ಸೀರೆಗಳು, ಕರ್ನಾಟಕದ ಮೊಳಕಾಲ್ಮೂರು ಸೀರೆಗಳು, ಪಶ್ಚಿಮ ಬಂಗಾಳದ ವಿಭಿನ್ನ ಜಮ್ದಾನಿ ಹಾಗೂ ಟಂಗೈಲ್ ಸೀರೆಗಳು, ಮಹೇಶ್ವರಿಗಳು ಹಾಗೂ ಚಂದೇರಿಗಳ ಸಂಗ್ರಹ ನಿಮ್ಮ ಆಯ್ಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಅದೇ ರೀತಿ ಸುಂದರ ಹಾಗೂ ಅತ್ಯಾಕರ್ಷಕವಾಗಿರುವ ಪೋಚಂಪಳ್ಳಿ ಹಾಗೂ ಟುಸ್ಸಾರ್ ಸೀರೆಗಳ ಅನಿಯಮಿತ ಸಂಗ್ರಹ ಈ ಆನ್‌ಲೈನ್ ಮೇಳದಲ್ಲಿ ಕಾಣಬಹುದು. ಅದಲ್ಲದೆ, ಕೈಮಗ್ಗದ ಮೂಲಕ ತಯಾರಿಸಿರುವ ಬಟ್ಟೆಗಳು, ಗೃಹಾಲಂಕಾರಿಕ ವಸ್ತುಗಳು, ಪುರುಷರ ಉಡುಪುಗಳು ಹಾಗೂ ಮಹಿಳೆಯರ ಆಭರಣಗಳು ದೊರೆಯಲಿವೆ. ಇದರ ಜತೆಗೆ ಲಂಬಾಡಿ ಸಮುದಾಯದವರು ತಯಾರಿಸಿರುವ ಎಂಬ್ರಾಯಿಡರಿ ಸೀರೆಗಳು, ದುಪ್ಪಟ್ಟಾಗಳು, ಸ್ಟೋಲ್‌ಗಳು ಈ ವಿಶೇಷ ಮಾರಾಟ ಮೇಳದಲ್ಲಿ ದೊರೆಯಲಿವೆ.  #GoSwadeshi  ಆಗೋಣ ಹಾಗೂ #HandmadeinIndia  ಅಭಿಯಾನಕ್ಕೆ ಬೆಂಬಲ ನೀಡೋಣ.

ಎಲ್ಲಿ?:https://gocoop.com/goswadeshi
ಸಂಪರ್ಕಿಸಿ: 9885551541

Leave a Comment