ಕಮಲೇಶ್ ಹತ್ಯೆ: ಸುಳಿವು ನೀಡಿದವರಿಗೆ ನಗದು ಬಹುಮಾನ

ಉತ್ತರ ಪ್ರದೇಶ, ಅ. ೨೧- ಹಿಂದೂ ಸಮಾಜವಾದಿ ಪಕ್ಷದ ನಾಯಕ ಕಮಲೇಶ್ ತಿವಾರಿಯನ್ನು ಹತ್ಯೆಗೈದ ಆರೋಪಿಗಳ ಕುರಿತಂತೆ, ಸುಳಿವು ನೀಡಿದವರಿಗೆ ೨.೫೦ ಲಕ್ಷ ರೂ. ಬಹುಮಾನವನ್ನು ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಘೋಷಿಸಿದೆ.
ಕಮಲೇಶ್ ತಿವಾರಿಯನ್ನು ಹತ್ಯೆಗೈದ ವ್ಯಕ್ತಿಗಳನ್ನು ಶೇಕ್ ಅಶ್ಫಾಕ್ ಹುಸೇನ್ ಮತ್ತು ಪತಾನ್ ಮೋಹಿನ್ ಉದ್ದೀನ್ ಅಹಮದ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಶಂಕಿತ ಹತ್ಯೆಗಾರರು ಕಳೆದ ಶುಕ್ರವಾರ ಕಮಲೇಶ್ ತಿವಾರಿ ಅವರನ್ನು ಭೇಟಿಯಾಗಿ ಸಿಹಿ ನೀಡಿದ್ದರು ಹಾಗೂ ಹತ್ಯೆಗೂ ಮೊದಲು ಅವರೊಂದಿಗೆ ೩೦ ನಿಮಿಷಗಳ ಕಾಲ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋದ ನಾಕಾಹಿಂದೋಲಾ ಪ್ರದೇಶದ ಕಮಲೇಶ್ ತಿವಾರಿ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಕಮಲೇಶ್ ಅವರನ್ನು ಚಿಕಿತ್ಸೆಗಾಗಿ ಲಕ್ನೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕಮಲೇಶ್ ತಿವಾರಿ ಅವರನ್ನು ಹತ್ಯೆಗೈದ ಆರೋಪಿಗಳು ಅವರ ಮನೆಯಲ್ಲಿ ಬಹುಮುಖ್ಯವಾದ ಸುಳಿವನ್ನು ಬಿಟ್ಟುಹೋಗಿದ್ದಾರೆ. ಉಳಿದಂತೆ ಅವರ ಮನೆಯಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿಗಳು ಸೆರೆಯಾಗಿರುವ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ವಿಶೇಷ ತನಿಖಾ ತಂಡದ ಅಧಿಕಾರಿ, ತಿವಾರಿ ಅವರ ಹತ್ಯೆಯನ್ನು ಗುಜರಾತ್, ಮಹಾರಾಷ್ಟ್ರ ಹಾಗೂ ಕಡಲಾಚೆಗಿನ ರಾಷ್ಟ್ರಗಳೊಂದಿಗೂ ಸಂಪರ್ಕವಿರಬಹುದು ಎಂದು ಶಂಕಿಸಿದ್ದಾರೆ. ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಸ್ಥಳೀಯ ನಾಯಕ ಜಮೀನ್ ಬಾಪು, ಮುಖ್ಯ ಶಂಕಿತ ವ್ಯಕ್ತಿಯಾಗಿದ್ದಾರೆಂದು ತಿಳಿಸಿದ್ದಾರೆ. ಕಮಲೇಶ್ ಅವರು ಬಳಸುತ್ತಿದ್ದ ನಕಲಿ ಫೇಸ್ ಬುಕ್ ಖಾತೆಯೊಂದಿಗೆ ಈತನ ಸಂಪರ್ಕವಿರುವುದನ್ನು ಬಹಿರಂಗಪಡಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸರು ಸ್ಥಳದಲ್ಲಿದ್ದ ರಕ್ತಸಿಕ್ತ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ತಿವಾರಿ ಅವರ ಕುಟುಂಬದವರು ಕೊಲೆಗೆ ಸಂಬಂಧಿಸಿದಂತೆ, ೧೧ ಜನರ ಮಾಹಿತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ನೀಡಿದ್ದು, ಕೊಲೆಗಾರರಿಗೆ ಉಗ್ರ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ತಿವಾರಿ ಅವರ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ೩೦ ನಿಮಿಷಗಳಿಗೂ ಹೆಚ್ಚುಕಾಲ ಮಾತನಾಡಿದ್ದಾರೆ.
ಲಾಲ್ ಬಾಗ್ ಏರಿಯಾದಲ್ಲಿರುವ ಕಲಸಾ ಹೊಟೇಲ್‌ಗೂ ಭೇಟಿನೀಡಿದ್ದ ಪೊಲೀಸರು, ಶಂಕಿತ ಉಗ್ರರು ಹೊಟೇಲ್‌ನಲ್ಲಿ ತಂಗಿರುವ ಕುರಿತು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೊಟೇಲ್ ಸಿಬ್ಬಂದಿ, ತಂಗಿದ್ದವರನ್ನು ಶೇಕ್ ಅಶ್ಫಾಕ್ ಹುಸೇನ್ ಮತ್ತು ಪತಾನ್ ಮೋಹಿನ್ ಉದ್ದೀನ್ ಅಹಮದ್ ಎಂದು ಗುರುತಿಸಿದ್ದಾರೆ. ಅವರು ತಂಗಿದ್ದ ಕೊಠಡಿಯಲ್ಲಿ ಅವರು ಧರಿಸಿದ್ದ ಕುರ್ತಾವನ್ನು ಹಾಗೂ ಅವರ ಕೈಯಲ್ಲಿ ಸ್ವೀಟ್ ಬಾಕ್ಸ್ ಇರುವುದನ್ನು ಗುರುತಿಸಿದ್ದಾರೆ.

Leave a Comment