ಕಮಲಹಾಸನ್ ನಟನೆಯ ಇಂಡಿಯನ್‍ 2’ ಸೆಟ್ ನಲ್ಲಿ ಅವಘಡ : 3 ಸಾವು

ಚೆನ್ನೈ, ಫೆ 20 – ಖ್ಯಾತ ನಟ ಕಮಲಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ನಲ್ಲಿ ಭಾರಿ ಅವಘಡ ಸಂಭವಿಸಿದ್ದು, 3 ಮಂದಿ ಸಹಾಯಕ ನಿರ್ದೇಶಕರು ಮೃತಪಟ್ಟಿದ್ದಾರೆ

ಚೆನ್ನೈ ಸಮೀಪದ ಇವಿಪಿ ಫಿಲ್ಮ್ ಸೊಸೈಟಿಯಲ್ಲಿ ಬುಧವಾರ ರಾತ್ರಿ ಈ ದುರಂತ ಜರುಗಿದ್ದು, ಇತರ 09 ಜನರು ಗಾಯಗೊಂಡಿದ್ದಾರೆ ಎಂದು ಲೈಕಾ ಪ್ರೊಡಕ್ಷನ್ ಹೌಸ್ ತಿಳಿಸಿದೆ

“ಚಿತ್ರೀಕರಣಕ್ಕಾಗಿ ಲೈಟಿಂಗ್ ವ್ಯವಸ್ಥೆ ಪರಿಶೀಲಿಸುತ್ತಿದ್ದಾ ಕ್ರೇನ್ ಗೆ ಕಟ್ಟಿದ್ದ ಹಗ್ಗ ತುಂಡಾಗಿದೆ. ಈ ವೇಳೆ ಕ್ರೇನ್ ನಲ್ಲಿದ್ದ ಬಾಕ್ಸ್ ಮಾದರಿಯ ವ್ಯವಸ್ಥೆಯಲ್ಲಿದ್ದ ಸಹಾಯ ನಿರ್ದೇಶಕ ಕೃಷ್ಣ, ಕಲಾ ವಿಭಾಗದ ಸಹಾಯಕ ನಿರ್ದೇಶಕರಾದ ಚಂದ್ರನ್ ಮತ್ತು ಮಧು ಮೃತಪಟ್ಟಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

1996ರ ‘ಇಂಡಿಯನ್’ ಚಿತ್ರದ ಅವತರಣಿಕೆ ‘ಇಂಡಿಯನ್ 2’ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದು, ಘಟನಾ ಸ್ಥಳದಲ್ಲೇ ಇದ್ದ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಇನ್ನು ನಟ ಕಮಲಹಾಸನ್ ಬೇರೊಂದು ಸೆಟ್ ನಲ್ಲಿದ್ದರು ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಮಲಹಾಸನ್, ದಿಗ್ಭ್ರಮೆಗೊಂಡಿದ್ದು, “ನಾನು ಹಲವಾರು ಅಪಘಾತಗಳನ್ನು ಎದುರಿಸಿದ್ದೀನಿ ಹಾಗೂ ಅದರಿಂದ ಹೊರಬಂದಿದ್ದೀನಿ. ಆದರೆ ಇಂದು ನಡೆದದ್ದು ತುಂಬಾ ಭಯಾನಕವಾದದ್ದು. ನನ್ನ ಮೂವರು ಸಹೋದ್ಯೋಗಿಗಳನ್ನು ಕಳೆದುಕೊಂಡಿದ್ದೇನೆ. ನನಗಾದ ಆಘಾತಕ್ಕಿಂತ ಅವರ ಅವರ ಕುಟುಂಬದವರ ನೋವು ಜಾಸ್ತಿ. ಆ ನೋವನ್ನು ನಾನೂ ಹಂಚಿಕೊಳ್ಳುತ್ತಿದ್ದೇನೆ. ಭಾರವಾದ ಮನಸ್ಸಿನಿಂದ ಸಂತಾಪ ಸೂಚಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಈ ಚಿತ್ರದ ತಾರಾಗಣದಲ್ಲಿ ಕಾಜಲ್ ಅಗರವಾಲ್, ರಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್ ಮುಂತಾದವರಿದ್ದಾರೆ. 2021ರ ಜನವರಿಗೆ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಲಾಗಿದೆ. ಈ ಬಗ್ಗೆ ಚಿತ್ರದ ನಟಿ ರಕುಲ್ ಪ್ರೀತ್ ಟ್ವೀಟ್ ಮಾಡಿದ್ದು, “ಇಂಡಿಯನ್ 2 ಸೆಟ್‌ನಲ್ಲಿ ಅಪಘಾತ ಸಂಭವಿಸಿದ ಸುದ್ದಿ ಕೇಳಿ ಆಘಾತವಾಯಿತು. ಕಳೆದುಕೊಂಡ ಜೀವಗಳ ಕುಟುಂಬವರನ್ನು ಹೇಗೆ ಸಮಾಧಾನ ಮಾಡುವುದು ಎಂದೇ ತಿಳಿಯುತ್ತಿಲ್ಲ. ಅತ್ಯಂತ ದುಃಖಕರ” ಎಂದಿದ್ದಾರೆ.

ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು,ನಟ ಕಮಲಹಾಸನ್ ಕೂಡ ರಾಜಕಾರಣಿಯಾಗಿರುವ ಹಿನ್ನೆಲೆಯಲ್ಲಿ ‘ಇಂಡಿಯನ್ 2’ ಸಂಚಲನ ಮೂಡಿಸುವ ಆಶಯವನ್ನು ಚಿತ್ರತಂಡ ಹೊಂದಿದೆ.

Leave a Comment