ಕಬ್ಬಿನ ಗದ್ದೆಯಲ್ಲಿ ಹೆಬ್ಬಾವು ಸೆರೆ

ಕೆ.ಆರ್.ಪೇಟೆ,ಅ.12- ತಾಲೂಕಿನ ಕುಂದನಹಳ್ಳಿ ಗ್ರಾಮದ ದಾಸೇಗೌಡ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಹೆಬ್ಬಾವು ಪತ್ತೆಯಾಗಿದ್ದು, ಉರಗ ತಜ್ಞ ಸ್ನೇಕ್ ಮುನ್ನಾ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದರು.
ಕುಂದನಹಳ್ಳಿ ಗ್ರಾಮದ ಮಾಸ್ತೀಗೌಡ ಅವರ ಮಗ ದಾಸೇಗೌಡ ಅವರು ತಮಗೆ ಸೇರಿದ ಬಿ.ಬಿ.ಕಾವಲು ಎಲ್ಲೆಯ ಸರ್ವೆ ನಂ.01ರಲ್ಲಿರುವ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಈ ಕಬ್ಬನ್ನು ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಸಾಗಿಸುವ ಸಲುವಾಗಿ ಕಾರ್ಮಿಕರಿಂದ ಇಂದು ಕಟಾವು ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಸುಮಾರು 30ರಿಂದ 40ಕೆ.ಜಿ. ತೂಕದ ಹಾಗೂ 10ಅಡಿ ಉದ್ದವಿರುವ ಹೆಬ್ಬಾವು ಕಾರ್ಮಿಕರಿಗೆ ಕಾಣಿಸಿಕೊಂಡಿದೆ. ಇದರಿಂದ ಹೆದರಿದ ಕಬ್ಬು ಕಟಾವು ಕಾರ್ಮಿಕರು ಸ್ಥಳದಿಂದ ಹೊರ ಓಡಿದ್ದಾರೆ. ತಕ್ಷಣ ಜಮೀನಿನ ಮಾಲೀಕ ರೈತ ದಾಸೇಗೌಡ ಅವರು ಉರಗ ತಜ್ಞ ಸ್ನೇಕ್ ಮುನ್ನಾ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಸ್ನೇಕ್ ಮುನ್ನಾ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಪಟ್ಟಣದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರು. ಹಾವನ್ನು ತಮ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಸ್ನೇಕ್ ಮುನ್ನಾ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹಾವನ್ನು ಸುರಕ್ಷಿತವಾಗಿ ಹಿಡಿಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ವನ್ಯಜೀವಿಗಳ ಸಂತತಿಯನ್ನು ಉಳಿಸಲು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಅರಣ್ಯಾಧಿಕಾರಿ ರವೀಂದ್ರ, ಉಪಸಂರಕ್ಷಣಾಧಿಕಾರಿ ರಾಘವೇಂದ್ರ ತಿಳಿಸಿದ್ದಾರೆ.

Leave a Comment