ಕಬಿನಿಯಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ; ಮೈಸೂರು – ನಂಜನಗೂಡು ಹೆದ್ದಾರಿ ಪುನಃ ಬಂದ್

ಮೈಸೂರು, ಆ. 17- ಕೇರಳದ ವಯನಾಡು ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯಕ್ಕೆ ಒಳಹರಿವಿನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ನಿರಂತರವಾಗಿ ಏರುತ್ತಿರುವ ಒಳಹರಿವಿನಿಂದಾಗಿ ಜಲಾಶಯದಿಂದ ನದಿಗೆ 90 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಪಿಲಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಮೈಸೂರು – ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಪುನಃ ಜಲಾವೃತಗೊಂಡಿದೆ.
ನಂಜನಗೂಡು-ಮೈಸೂರು ರಸ್ತೆಯ ಮಲ್ಲನಮೂಲೆ ಮಠದ ಬಳಿ ಸೇತುವೆ ಹಾಗೂ ರಸ್ತೆ ಜಲಾವೃತಗೊಂಡಿದ್ದು, ಸಂಚಾರ ಬಂದ್ ಮಾಡಲಾಗಿದೆ. ರಸ್ತೆಯಲ್ಲಿ ನಾಲ್ಕು ಅಡಿ ನೀರು ನಿಂತ ಪರಿಣಾಮ, ಬೆಳ್ಳಂಬೆಳಗ್ಗೆಯೇ ಪೊಲೀಸರು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡರು. ಹೆದ್ದಾರಿ ಬಂದ್ ಆದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಬಸವನಪುರ, ಕೆಂಪಿಸಿದ್ದನಹುಂಡಿ, ಅಕಡನಹಳ್ಳಿ ಹುಂಡಿ, ಕಡಕೊಳ ಮಾರ್ಗವಾಗಿ ಸಂಚರಿಸಲು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

Leave a Comment