ಕಬಡ್ಡಿ ಆಟಗಾರ್ತಿ ಮೇಲೆ ಹಲ್ಲೆ  ಬಿ.ಸಿ.ರಮೇಶ್ ಸೇರಿ ನಾಲ್ವರ ಸೆರೆ

ಬೆಂಗಳೂರು,ಜ.೨೨-ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಹಾಗೂ ಪೊಲೀಸ್ ಪೇದೆ ಉಷಾರಾಣಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ಭಾರತ ಕಬಡ್ಡಿ ತಂಡದ ಮಾಜಿ ಆಟಗಾರ ಬಿ.ಸಿ.ರಮೇಶ್ ಸೇರಿ ನಾಲ್ವರನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿದ್ದಾರೆ.

ಪ್ರೊ. ಕಬಡ್ಡಿ ಲೀಗ್‌ನ ಬೆಂಗಾಲ್ ವಾರಿಯರ್ಸ್ ತಂಡದ ಮುಖ್ಯ ತರಬೇತುದಾರ ಬಿ.ಸಿ. ರಮೇಶ್ ಜೊತೆಗೆ ರಾಜ್ಯ ಅಸೋಸಿಯೇಷನ್‌ನ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋರ್ ತಿಳಿಸಿದ್ದಾರೆ.

ಉಷಾ ರಾಣಿ ಅವರು ತರಬೇತು ದಾರ ಬಿ.ಸಿ. ರಮೇಶ್, ರಾಜ್ಯ ಅಸೋಸಿಯೇಷನ್‌ನ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಹಾಗೂ ಷಣ್ಮುಗಂ ಎಂವವರ ವಿರುದ್ಧ ಮಂಗಳವಾರ ರಾತ್ರಿ ದೂರು ನೀಡಿದ್ದರು ದೂರು ಆಧರಿಸಿ ತನಿಖೆ ಕೈಗೊಂಡ ಸಂಪಂಗಿರಾಮನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಕಿರಿಯರ ಕಬಡ್ಡಿ ಶಿಬಿರ ನಡೆಯುತ್ತಿದೆ. ಶಿಬಿರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಅತಿಥಿಯಾಗಿ ಬಂದಿದ್ದರು. ಈ ಅತಿಥಿಯನ್ನು ಕಬಡ್ಡಿ ಆಟಗಾರ್ತಿಯರಿಗೆ ಉಷಾರಾಣಿ ಪರಿಚಯಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿ.ಸಿ. ರಮೇಶ್, ‘ಅಧಿಕಾರಿಯನ್ನು ಕರೆದೊಯ್ದು ಪರಿಚಯಿಸಿದ್ದು ಸರಿಯಲ್ಲ’ ಎಂದು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಲು ಉಷಾ ರಾಣಿ ಅವರನ್ನು ನಿನ್ನೆ ಸಂಜೆ ತಮ್ಮ ಕೊಠಡಿಗೆ ರಮೇಶ್ ಕರೆಸಿದ್ದರು. ಈ ವೇಳೆ ರಮೇಶ್ ಮತ್ತು ಉಷಾರಾಣಿ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಕೊಠಡಿಯಲ್ಲಿದ್ದ ರಮೇಶ್, ನರಸಿಂಹ, ಮುನಿರಾಜು, ಷಣ್ಮುಗಂ ಹಲ್ಲೆ ನಡೆಸಿದ್ದಾರೆ ಎಂದು ಉಷಾರಾಣಿ ಸಹೋದರ ನವೀನ್ ತಿಳಿಸಿದ್ದಾರೆ.

‘ಘಟನೆ ಬಗ್ಗೆ ಉಷಾರಾಣಿ ದೂರು ನೀಡಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ. ಸ್ಥಳೀಯ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

*ಕಬಡ್ಡಿ ಆಟಗಾರ್ತಿ ಹಾಗೂ ಪೊಲೀಸ್ ಪೇದೆ ಉಷಾರಾಣಿ ಮೇಲೆ ಹಲ್ಲೆ
*ಕಬಡ್ಡಿ ತಂಡದ ಮಾಜಿ ಆಟಗಾರ ಬಿ.ಸಿ.ರಮೇಶ್ ಸೇರಿ ನಾಲ್ವರ ಬಂಧನ
*ಕಂಠೀರವ ಕ್ರೀಡಾಂಗಣದಲ್ಲಿ ಕಿರಿಯರ ಕಬಡ್ಡಿ ಶಿಬಿರದಲ್ಲಿ ಘಟನೆ
*ಹಲ್ಲೆ ಬಗ್ಗೆ ಪೊಲೀಸರಿಗೆ ದೂರು ನೀಡಿದ ಉಷಾರಾಣಿ
*

Leave a Comment