ಕಪ್ ಗೆಲ್ಲುವ ವಿಶ್ವಾಸದಲ್ಲಿ ಆರ್‌ಸಿಬಿ: ತಂಡ ಆಯ್ಕೆಗೆ ಕೊಹ್ಲಿ ಸಂತಸ

ಐಪಿಎಲ್ 13ನೇ ಆವೃತ್ತಿ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಿನಕುರಳಿ ಕ್ರಿಕೆಟ್ ಎಂದೇ ಖ್ಯಾತಿಯಾಗಿದೆ. ಈಗಾಗಲೇ 12 ಆವೃತ್ತಿಗಳನ್ನು ಪೂರೈಸಿ 13ನೇ ಆವೃತ್ತಿಗೆ ವೇದಿಕೆ ಅಣಿಯಾಗುತ್ತಿದೆ. ಆದರೆ ಏನು ಮಾಡೋದು ಐಪಿಎಲ್‌ನಲ್ಲಿ ನೆಚ್ಚಿನ ತಂಡವೆನಿಸಿರುವ ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜಱ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ 13ನೇ ಆವೃತ್ತಿಯಲ್ಲಿ ಈ ಕೊರತೆ ನೀಗಿಸಲು ವಿಶ್ವಾಸದಲ್ಲಿದೆ ಆರ್‌ಸಿಬಿ.

rcb2
ಪ್ರತಿ ಬಾರಿಯೂ ಕಪ್ ನಮ್ದೆ ಅಂತ ಅಭಿಮಾನಿಗಳ ಹಾರೈಕೆ ಮಾತ್ರ ಮೊಳಗುತ್ತಲೇ ಇದೆ. ಆದರೆ ಕಪ್ ಮಾತ್ರ ನಮ್ಮದಾಗಿಲ್ಲ. ಹಾಗೆ ನೋಡಿದರೆ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಹಾಗೂ ದಾಖಲೆಗಳ ಸರದಾರ. ಆದರೆ ಐಪಿಎಲ್ ಕಪ್ ಗೆಲ್ಲುವುದು ಮಾತ್ರ ಇನ್ನೂ ಸಾಧ್ಯವಾಗಿಲ್ಲ. 12ನೇ ಆವೃತ್ತಿಯಲ್ಲಿ ಆರ್‌ಸಿಬಿ ತೀರಾ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಈಗ ಐಪಿಎಲ್ ಹರಾಜು ಪ್ರಕ್ರಿಯೆ ನಂತರ ವಿರಾಟ್ ಕೊಹ್ಲಿ ಅತೀವ ಸಂತಸಗೊಂಡಿದ್ದು ಕಪ್ ಗೆದ್ದೇ ತೀರುವ ತವಕದಲ್ಲಿದ್ದಾರೆ.
ಈ ಬಾರಿಯ ಕಪ್ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ. ಹರಾಜಿನಲ್ಲಿ 8 ಮಂದಿ ಆಟಗಾರರನ್ನು ಖರೀದಿ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ನಿರ್ಗಮನದ ಬಳಿಕ ಆರಂಭಿಕ ಆಟಗಾರನ ಕೊರತೆ ಎದುರಾಗಿತ್ತು. ಈಗ ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟಗಾರ ಆರೋನ್ ಫಿಂಚ್ ಅವರನ್ನು ಖರೀದಿಸಿದೆ.
ಮತ್ತೊಂದೆಡೆ ಆರ್‌ಸಿಬಿ ತಂಡದಲ್ಲಿ ನಿಪುಣ ಆಲ್ ರೌಂಡರ್ ಆಟಗಾರನಿಲ್ಲದೆ ಸೊರಗಿತ್ತು. ಈಗ ಅದಕ್ಕೂ ಪರಿಹಾರ ಕಂಡುಕೊಂಡಿದ್ದು ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಅವರನ್ನು ಖರೀದಿಸಿದೆ. ಈ ಹಿಂದೆ ಕ್ರಿಸ್ ಮೋರಿಸ್ ಡೆಲ್ಲಿ ತಂಡದ ಪರ ಉತ್ತಮ ಆಟ ಪ್ರದರ್ಶಿಸಿದ್ದರು. ಈಗ ಆರ್‌ಸಿಬಿ ಪಾಲಾಗಿದ್ದು ಉತ್ತಮ ಆಟ ಪ್ರದರ್ಶಿಸುವ ವಿಶ್ವಾಸದಲ್ಲಿದ್ದಾರೆ.

rcb3
ತಂಡದಲ್ಲಿ ಬೌಲಿಂಗ್ ಕೊರತೆ ನೀಗಿಸಲು ದಿಟ್ಟ ಹೆಜ್ಜೆಯನ್ನಿಟ್ಟಿರುವ ಆರ್‌ಸಿಬಿ ಮಾಲೀಕರು ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಕೇನ್ ರಿಚರ್ಡ್ ಸನ್ ರನ್ನು ಕರೆ ತಂದಿದ್ದಾರೆ. ಇದರ ಜೊತೆಗೆ ಮತ್ತೋರ್ವ ವೇಗಿ ಡೇಲ್ ಸ್ಟೇನ್‌ರನ್ನು ಮತ್ತೆ ಕರೆತಂದಿರುವುದು ಬೌಲಿಂಗ್ ವಿಭಾಗಕ್ಕೆ ಆನೆಬಲ ಬದಂತಾಗಿದೆ.
ಈ ಆಟಗಾರರ ಜೊತೆಗೆ ಕರ್ನಾಟಕದ ಪವನ್ ದೇಶ್ ಪಾಂಡೆ, ಇಸುರು ಉಡಾನ, ಜೋಶುವಾ ಫಿಲಿಪ್ ಮತ್ತು ಶಬಾಬ್ ಅಜ್ಮದ್ ಅವರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ಈ ಬಾರಿಯ ಐಪಿಎಲ್‌ನಲ್ಲಿ ಎದುರಾಳಿ ತಂಡಗಳಿಗೆ ಸಡ್ಡು ಹೊಡೆಯಲು ಆರ್‌ಸಿಬಿ ಟೊಂಕ ಕಟ್ಟಿ ನಿಂತಿದೆ.

rcb4
ಐಪಿಎಲ್‌ ಹರಾಜಿಗೂ ಮುನ್ನ ಎ.ಬಿ. ಡಿವಿಲಿಯರ್ಸ್, ವೇಯಿನ್ ಆಲಿ ಸೇರಿದಂತೆ 12 ಮಂದಿ ಆಟಗಾರರನ್ನು ಉಳಿಸಿಕೊಂಡಿತ್ತು. ಕೋಸಿಂಗ್ ಬಗ್ಗೆಯೂ ತೀವ್ರ ಆಸಕ್ತಿ ವಹಿಸಿದ್ದು, ಮೈಕ್ ಹೆಸ್ಸನ್ ಮತ್ತು ಸೈಮನ್ ಕ್ಯಾಟಿಚ್ ಅವರನ್ನು ಸೇರಿಸಿಕೊಂಡು ಉತ್ತಮ ರೀತಿಯಲ್ಲಿ ತಂಡ ಕಟ್ಟಲು ರಣತಂತ್ರ ರೂಪಿಸಲಾಗಿದೆ.
ಹನ್ನೆರಡು ಆವೃತ್ತಿಯಲ್ಲೂ ಆರ್‌ಸಿಬಿ ತಂಡ ಬಲಿಷ್ಠವಾಗಿತ್ತು. ಆದರೆ ಪಂದ್ಯ ಗೆಲ್ಲಬಹುದಾಗಿದ್ದ ಪಂದ್ಯಗಳಲ್ಲಿ ಪ್ರಮುಖ ಆಟಗಾರರು ವೈಫಲ್ಯದಿಂದಾಗಿ ಸೋಲು ಅನುಭವಿಸಿತ್ತು. ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಎಂಟು ಮಂದಿ ಆಟಗಾರರನ್ನು ಖರೀದಿಸಿ ತಂಡಕ್ಕೆ ಶಕ್ತಿ ತುಂಬಿರುವುದು ಗಮನಾರ್ಹ ಸಂಗತಿ.
8 ಮಂದಿ ಆಟಗಾರರನ್ನು ಖರೀದಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನಾಯಕ ನಿರಾಟ್ ಕೊಹ್ಲಿ. ಹೊಸ ಆಟಗಾರರೊಂದಿಗೆ 13ನೇ ಆವೃತ್ತಿಯಲ್ಲಿ ಆಡಲು ಸಜ್ಜಾಗಿದ್ದೇವೆ. ಸಾಕಷ್ಟು ಚರ್ಚೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಮತೋಲಿನ ತಂಡವನ್ನು ಆಯ್ಕೆ ಮಾಡಿದ್ದೇವೆ.
ಹೀಗಾಗಿ ಈ ಬಾರಿಯ ಐಪಿಎಲ್ ಕನದಲ್ಲಿ ಉತ್ತಮ ಆರಂಭ ಮಾಡುವ ಇರಾದೆ ವ್ಯಕ್ತಪಡಿಸಿದ್ದಾರೆ.
ತವರು ನೆಲ ಮತ್ತು ದೇಶದ ಯಾವುದೇ ಭಾಗದಲ್ಲಿ ಎಂತಹ ವಾತಾವರಣದಲ್ಲೂ ಆಕ್ರಮಣಕಾರಿ ಆಟವಾಡಲು ಸಮತೋಲನದಿಂದ ಕೂಡಿದ ತಂಡವನ್ನು ಕಣಕ್ಕಿಳಿಸುತ್ತೇವೆ. ಹೀಗಾಗಿ ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಾಗಿದೆ ಎಂದು ಆರ್‌ಸಿಬಿ ನಿರ್ದೇಶಕ ಮೈಕ್ ಹೆಸ್ಸನ್ ಹೇಳಿದ್ದು ಹೀಗೆ.
ಈ ಬಾರಿಯ ಐಪಿಎಲ್‌ಗೆ ತರಬೇತುದಾರರಿಂದ ಉತ್ತಮ ಸಲಹೆ, ಸೂಚನೆಗಳನ್ನು ಪಡೆದು ಅತ್ಯಂತ ಬಲಿಷ್ಠ ತಂಡವನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುತ್ತಾರೆ. ಆರ್‌ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲಾ.
ಇವೆಲ್ಲ ಏನೇ ಇರಲಿ, ಕಳೆದ 12 ಆವೃತ್ತಿಯಲ್ಲಿ ಆದ ವೈಫಲ್ಯ. ಲೋಪದೋಷವನ್ನು ಬದಿಗಿಟ್ಟು ಆರ್‌ಸಿಬಿ ಶ್ರೇಷ್ಠ ಪ್ರದರ್ಶನ ನೀಡಬೇಕಾದ ಒತ್ತಡಕ್ಕೆ ಸಿಲುಕಿದೆ. 13ನೇ ಐಪಿಎಲ್ ಆವೃತ್ತಿ ಕೊಹ್ಲಿ ಪಡೆಗೆ ಅಗ್ನಿ ಪರೀಕ್ಷೆಯಾಗಿದೆ.
ಇದುವರೆಗೂ ಕಳಪೆ ಆಟವನ್ನು ಪ್ರದರ್ಶಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿರುವ ಆರ್‌ಸಿಬಿ, 13ನೇ ಐಪಿಎಲ್ ಆವೃತ್ತಿಯಲ್ಲಿ ಪುಟಿದೆದ್ದು ಈ ಬಾರಿ ಕಪ್ ನಮ್ದೆ ಎಂಬುದನ್ನು ಸಾಧಿಸಬೇಕಾದ ಗುರುತರ ಜವಾಬ್ದಾರಿ ಆಟಗಾರರ ಮೇಲಿದೆ.
ಸತತ ಸೋಲುಗಳಿಂದ ಹೈರಾಣವಾಗಿರುವ ಆರ್‌ಸಿಬಿ ಯನ್ನು ಹುರಿದುಂಬಿಸಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಈ ಚಿನಕುರಳಿ ಕ್ರಿಕೆಟ್ ಆಟವನ್ನು ಕಣ್ತುಂಬಿಕೊಳ್ಳಲು ಇನ್ನಷ್ಟು ದಿನ ಕಾಯಬೇಕು.

Leave a Comment