ಕಪ್ಪು ಪೆಟ್ಟಿಗೆಯಲ್ಲಿ ಕೇವಲ ಭದ್ರತಾ ಉಪಕರಣ

ಬೆಂಗಳೂರು.ಏ.15. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಹೆಲಿಪ್ಯಾಡ್ ನಿಂದ ಸಾಗಿಸಲಾದ ಕಪ್ಪು ಪೆಟ್ಟಿಗೆ ಕುರಿತು ಅಲ್ಲಿನ ಜಿಲ್ಲಾಧಿಕಾರಿ ತನಿಖೆ ನಡೆಸಿದ್ದು, ಅದು ಕೇವಲ ಭದ್ರತಾ ಉಪಕರಣಗಳಿದ್ದ ಬಾಕ್ಸ್ ಆಗಿತ್ತು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರ ಹೆಲಿಪ್ಯಾಡ್ ನಿಂದ ಕಪ್ಪು ಪೆಟ್ಟಿಗೆ ಒಂದನ್ನು ಕೆಳಗಿಳಿಸಿ ಇನೋವಾ ಕಾರಿನಲ್ಲಿ ಸಾಗಿಸಲಾಗಿತ್ತು. ಆ ಬಾಕ್ಸ್ ಅನುಮಾನಾಸ್ಪದವಾಗಿ ಕಂಡುಬರುತ್ತಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‍ ಜಿಲ್ಲಾಧಿಕಾರಿಗೆ ದೂರು ನೀಡಿತ್ತು.

ಈ ಸಂಬಂಧ ಜಿಲ್ಲಾಧಿಕಾರಿ ತನಿಖೆ ನಡೆಸಿದ್ದಾರೆ. ಅದೊಂದು ಸಹಜವಾದ ಪೆಟ್ಟಿಗೆಯಾಗಿದ್ದು, ಅದರಲ್ಲಿ ಭದ್ರತಾ ಉಪಕರಣಗಳಿದ್ದವು. ಅದು ಅವರ ಭದ್ರತಾ ವ್ಯವಸ್ಥೆಯ ಭಾಗವಾಗಿತ್ತು. ಆದ್ದರಿಂದ ಅದನ್ನು ಪ್ರಧಾನಿಯವರ ಹೆಲಿಪ್ಯಾಡ್ ಗೆ ಮರಳಿಸಲಾಗಿದೆ. ಅಲ್ಲಿಂದ ಪ್ರಧಾನಿ ಮೈಸೂರಿಗೆ ತೆರಳಿದ್ದರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಕ್ರಿಕೆಟಿಗ ಹಾಗೂ ವಿಧಾನಸಭಾ ಚುನಾವಣೆಯ ರಾಯಭಾರಿಯಾಗಿದ್ದ ರಾಹುಲ್‍ ದ್ರಾವಿಡ್ ಅವರು ಮತದಾನದ ಅವಕಾಶದಿಂದ ವಂಚಿತರಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆಯೋಗ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅವರು ಮನೆಯಲ್ಲಿರಲಿಲ್ಲ. ಅವರ ಮೂಲ ಮನೆಯಲ್ಲಿ ಈಗ ಅವರ ಸಹೋದರ ವಾಸಿಸುತ್ತಿದ್ದಾರೆ.

ರಾಹುಲ್ ದ್ರಾವಿಡ್ ಅವರು ನಿಗದಿತ ಅವಧಿಯಲ್ಲಿ ವಿಳಾಸ ಬದಲಾವಣೆ ಕುರಿತು ಫಾರಂ 6 ಸಲ್ಲಿಸಬೇಕಿತ್ತು. ತಮಗೆ ಈ ಕುರಿತು ತಡವಾಗಿ ಮಾಹಿತಿ ದೊರೆಯಿತು. ಸದ್ಯ ಈ ವಿಚಾರ ಕೇಂದ್ರ ಚುನಾವಣಾ ಆಯೋಗದ ಪರಿಶೀಲನೆಯಲ್ಲಿದೆ ಎಂದರು.

ರಾಹುಲ್ ದ್ರಾವಿಡ್ ಅವರಿಗೆ ಮತದಾನದ ಅವಕಾಶ ಕೈತಪ್ಪಿದ್ದಕ್ಕೆ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಅವರ ವೈಯಕ್ತಿಕ ಸಮಸ್ಯೆ. ಅವರ ಸಹೋದರರ ನಡುವಿನ ಸಂವಹನ ಕೊರತೆಯಿಂದ ಈ ತೊಂದರೆ ಎದುರಾಗಿದೆ. ಇದರಲ್ಲಿ ಆಯೋಗದ ಪಾತ್ರವೇನಿಲ್ಲ ಎಂದು ಸ್ಪಷ್ಟನೆ ನೀಡಿದರು.

Leave a Comment