ಕಪಿಲ್ ದೇವ್ ಲುಕ್‌ನಲ್ಲಿ ರಣವೀರ್ ಮಿಂಚಿಂಗ್

83 ಶೂಟಿಂಗ್‌ನಲ್ಲಿ ಬ್ಯುಸಿ
ಹರಿಯಾಣದ ಸುಂಟರಗಾಳಿ ಎಂದೇ ಖ್ಯಾತರಾಗಿದ್ದ ಭಾರತೀಯ ಕ್ರಿಕೆಟ್ ತಂಡ ಆಲ್ ರೌಂಡರ್ ಮತ್ತು ಮಾಜಿ ನಾಯಕ ಕಪಿಲ್ ದೇವ್ 1983 ರಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ದೇಶಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ ತೊಡಿಸಿದ್ದರು. ಈ ಕ್ಷಣ ನಿಜಕ್ಕೂ ಭಾರತೀಯ ಪಾಲಿಗೆ ಮರೆಯಲಾಗದ ದಿನ. ಈ ಅಭೂತ ಪೂರ್ವ ಸಾಧನೆ ಮಾಡಿದ ಕಪಿಲ್ ದೇವ್ ಜೀವನಾಧಾರಿತ 83 ಚಿತ್ರ ಬಾಲಿವುಡ್‌ನಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಅಂದಹಾಗೆ ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ಯಶಸ್ವಿ ಬಾಲಿವುಡ್ ನಟ ರಣವೀರ್ ಸಿಂಗ್ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ನಟಿ ದೀಪಿಕಾಳನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣವೀರ್ ಎಂದಿನಂತೆ ಚಿತ್ರ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಪದ್ಮಾವತ್, ಗಲ್ಲಿಬಾಯ್, ಬಾಜಿರಾವ್ ಮಸ್ತಾನಿ ಮತ್ತು ರಾಮಲೀಲಾ ಗಳಂತಹ ಯಶಸ್ವಿ ಚಿತ್ರಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡವರು ರಣವೀರ್. ಅದರಲ್ಲೂ ಪದ್ಮಾವತ್ ಚಿತ್ರ 300 ಕೋಟಿ ರೂಗಳಿಗೂ ಹೆಚ್ಚಿನ ವಹಿವಾಟು ನಡೆಸಿದ ಮೊದಲ ತಾರೆ ಎಂಬ ಹೆಗ್ಗಳಿಕೆಗೆ ರಣವೀರ್‌ಗೆ ಸಲ್ಲುತ್ತದೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಸೂಪರ್ ಸ್ಟಾರ್ ಆಗಿಯೂ ಹೊರ ಹೊಮ್ಮಿದ್ದಾರೆ. ಈಗ 83 ಚಿತ್ರದಲ್ಲಿ ಕಪಿಲ್ ದೇವ್ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ.
ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ 8 ವರ್ಷಗಳ ಅವಧಿಯಲ್ಲಿ ಉನ್ನತ ಸ್ಥಾನದಲ್ಲಿ ರಣವೀರ್ ತೇಲಾಡುತ್ತಿದ್ದಾರೆ. ಇಲ್ಲಿಯವರೆಗೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ವಿಲಕ್ಷಣ ಮಾದರಿಯ ಫ್ಯಾಷನ್ ಚಿಂತನೆ ಅಥವಾ ಚಲನಚಿತ್ರಗಳ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಅವರು ರಾಜಿಯಾಗಿಲ್ಲ.
ರಣವೀರ್ ಅವರ ಪ್ರಸ್ತುತ ಯೋಜನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ದುರ್ಬಲರ ಪರವಾಗಿದ್ದಾರೆ ಎಂಬ ಅಂಶ ಅವರು ಅಭಿನಯಿಸಿರುವ ಚಿತ್ರಗಳಲ್ಲಿ ಎದ್ದು ಕಂಡಿರುವುದು ಸುಳ್ಳಲ್ಲ. ಗಲ್ಲಿಬಾಯ್ ಚಿತ್ರದಲ್ಲಿ ಮುರಾದ್ ನಟನೆಯ ಮುಖೇನ ಮುಂಬೈ ಬೀದಿ ಹುಡುಗರ ಧ್ವನಿಯನ್ನು ಎತ್ತಿ ತೋರಿಸಿದ್ದರು.
ಈಗ ಮುಂದಿನ ಚಿತ್ರದಲ್ಲಿ ಕಬೀರ್ ಖಾನ್ ಅವರ 83 ರಲ್ಲಿ ರಣವೀರ್ ಮತ್ತೊಮ್ಮೆ ದುರ್ಬಲರನ್ನು ಸಂಭ್ರಮಿಸಲು ಮುಂದಾಗಿದ್ದಾರೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದ ತಂಡವನ್ನು ಅತ್ಯಂತ ದುರ್ಬಲ ತಂಡವೆಂದು ವಿಶ್ವಕಪ್ ಟೂರ್ನಿಯಲ್ಲಿ ಹಣೆಪಟ್ಟಿ ಕಟ್ಟಲಾಗಿತ್ತು. ಇದೇ ಕಪಿಲ್ ನಾಯಕತ್ವದ ತಂಡ ಪ್ರಶಸ್ತಿ ಗೆದ್ದು ಎಲ್ಲರ ಬಾಯಿಗೆ ಬೀಗ ಹಾಕಿತ್ತು. ಈಗ ಕಪಿಲ್ ದೇವ್ ಜೀವನಾಧಾರಿತ ಚಿತ್ರ ತೆರೆಗೆ ಬರುತ್ತಿದ್ದು, ಕಪಿಲ್ ಪಾತ್ರದಲ್ಲಿ ರಣವೀರ್ ಅಭಿನಯಿಸುತ್ತಿರುವುದು ಬಾಲಿವುಡ್ ಚಿತ್ರರಂಗದಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ.
ಈ ಚಿತ್ರದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ದೇಶವೇ ಬೆಕ್ಕಸ ಬೆರಗಾಗುವಂತೆ ವಿಶ್ವಕಪ್ ತಂದುಕೊಟ್ಟರು ಎಂಬ ಕಥಾ ಹಂದರವನ್ನು 83 ಒಳಗೊಂಡಿದೆ. ಕಪಿಲ್ ಪಾತ್ರವನ್ನು ರಣವೀರ್ ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕು.
ರಣವೀರ್ ಸಕಾರಾತ್ಮಕ ಪ್ರಯೋಗಾತ್ಮಕ ಸಾಹಸ ಪಾತ್ರಕ್ಕೆ ಮುಂದಾಗಿದ್ದಾರೆ. ದೇಶದೆಲ್ಲೆಡೆ ಇದುವರೆಗೂ ಅವಿಷ್ಕಾರವಾಗದ ಕಲಾವಿದರನ್ನು ಪೋಷಿಸಿ ಬೆಳೆಸಲು ಕಾರಣವಾಗಿದೆ. ಸಿನಿಮಾ ರಂಗಕ್ಕೆ ಹೊರಗಿನವರಾದ ಹಾಗೂ ಭಾರತೀಯ ಚಿತ್ರರಂಗದಲ್ಲಿ ಪ್ರತ್ಯೇಕ ಮಾನದಂಡವನ್ನು ಸ್ಥಾಪಿಸಿರುವ ರಣವೀರ್ ಕಲಾವಿದರ ಜೀವನ ಬದಲಿಸುವ ಅವಕಾಶಗಳನ್ನು ನೀಡುವ ಗುರಿ ಹೊಂದಿದ್ದಾರೆ ಬಾಲಿವುಡ್ ಯಶಸ್ವಿ ನಟ.
ತಾವು ಕೂಡ ಒಂದು ರೀತಿಯಲ್ಲಿ ದುರ್ಬಲನಾಗಿದ್ದೇನೆ. ಈ ರೀತಿ ಪಾತ್ರಗಳಿಂದ ಆಕರ್ಷಿತನಾಗಿದ್ದೇನೆ. ನಾನು ಸಂಪೂರ್ಣ ಹೊರಗಿನವನಾಗಿದ್ದು, ಎಲ್ಲಿಂದಲೋ ಬಂದು ನನಗೆ ಹೊಂದಿಕೊಳ್ಳುವ ಮತ್ತು ಕೆಲಸಕ್ಕೆ ಖಾತ್ರಿ ನೀಡುವಂತಹ ಚಿತ್ರರಂಗದವರ ಸಂಪರ್ಕ ಇರುವುದಿಲ್ಲ. ತಾವು ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದಾಗ ನನಗೆ ಅಚ್ಚರಿಯ ಅವಕಾಶವಾಗಿತ್ತು. ತಾನು ಅಭಿನಯಿಸಿದ ಮೊದಲ ಚಿತ್ರವೇ ಭರ್ಜರಿ ಯಶಸ್ಸು ಕಂಡಿರುವುದಕ್ಕೆ ನನ್ನಂತಹ ಅದೃಷ್ಟವಂತ ಯಾರೂ ಇಲ್ಲ. ಕಲಾವಿದನಾಗಿ, ಪ್ರದರ್ಶಕನಾಗಿ, ನಟನಾಗಿ ಒಬ್ಬ ದುರ್ಬಲನ ಪಯಣ ನನ್ನದಾಗಿದೆ ಎನ್ನುತ್ತಾರೆ ರಣವೀರ್.
ಅಂದಹಾಗೆ ರಣವೀರ್ ಸಿಂಗ್ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗಾಗಿ ತಮ್ಮ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ವಿಶೇಷ ಬಳವಳಿಯನ್ನು ನೀಡಿದ್ದಾರೆ. ಕಪಿಲ್ ದೇವ್ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಥೇಟ್ ಕಪಿಲ್ ದೇವ್ ರೀತಿಯಲ್ಲಿ ಕಾಣುವ ಪೋಟೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಣವೀರ್ ಮೊದಲ ಲುಕನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಜನ್ಮ ದಿನದ ಪ್ರಯುಕ್ತ ಹರಿಯಾಣದ ಸುಂಟರ ಗಾಳಿ ಕಪಿಲ್ ದೇವ್ ಎಂದು ಬರೆದುಕೊಂಡಿರುವುದು ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ.
ಈ ಚಿತ್ರದ ಪ್ಲಸ್ ಪಾಯಿಂಟ್ ಏನಪ್ಪ ಅಂದ್ರೆ ಗಲಿಯೋಂಕಿ ರಾಸಲೀಲ ರಾಮಲೀಲ ಚಿತ್ರದಲ್ಲಿ ಒಟ್ಟಾಗಿ ಪತಿ-ಪತ್ನಿಯಾಗಿ ನಟಿಸಿದ್ದ ದೀಪಿಕಾ ಮತ್ತು ರಣವೀರ್ ಮತ್ತೆ 83ರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಪಿಲ್ ದೇವ್ ಆಗಿ ರಣವೀರ್ ಮಿಂಚುತ್ತಿದ್ದರೆ ದೀಪಿಕಾ ಪತ್ನಿ ರೋಮಿ ಭಾಟಿಯಾ ಪಾತ್ರ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ಮತ್ತೊಂದು ಆಕರ್ಷಣೆ.
ಸ್ಫೂರ್ತಿ ನೀಡುವ ಕಥೆಗಳ ಕಡೆ ಯಾವಾಗಲು ಆಕರ್ಷಿತ ರಾಗುತ್ತಾರಂತೆ ರಣವೀರ್ ಈ ರೀತಿಯ ಕಥೆಗಳು ದುರ್ಬಲರ ಕಥೆಯಾಗಿರುತ್ತದೆ. ದುರ್ಬಲ ವ್ಯಕ್ತಿಗಳ ಕಥೆಗಳು ತಮ್ಮ ಹೃದಯಕ್ಕೆ ಹತ್ತಿರವಾಗಿರುವ ಕಥೆಗಳಾಗಿರುತ್ತವೆ. ಮನುಷ್ಯರಾಗಿ ನಾವೆಲ್ಲರೂ ದುರ್ಬಲರೇ ಅಂತಿಮವಾಗಿ ಗೆಲ್ಲುವುದನ್ನು ಅವರು ಇಷ್ಟ ಪಡುತ್ತಾರಂತೆ.
ಇವೆಲ್ಲ ಏನೇ ಇರಲಿ, ಕಪಿಲ್ ಪಾತ್ರದಲ್ಲಿ ಮಿಂಚುತ್ತಿರುವ ರಣವೀರ್ ಯಾವ ರೀತಿ ನಟಿಸಿದ್ದಾರೆ ಎಂಬುದು ಕುತೂಹಲ ಕೆರಳಿಸಿದ್ದು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದಂತೂ ಸುಳ್ಳಲ್ಲ.

Leave a Comment