ಕನ್ನಡ ಭಾಷೆಯ ಅಳಿವು-ಉಳಿವು ಯುವಜನರ ಕೈಯಲ್ಲಿದೆ

ತುಮಕೂರು, ನ. ೮- ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ವಿಧಾನ ಪರಿಷತ್ ಮಾಜಿ  ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.

ನಗರದ 26ನೇ ವಾರ್ಡಿನ ಚಂದ್ರಶೇಖರ್ ಆಜಾದ್ ಪಾರ್ಕಿನಲ್ಲಿ ನಗರಪಾಲಿಕೆ ಕೌನ್ಸಿಲರ್ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ 63ನೇ ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಸಸಿಗಳನ್ನು ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇದು ನವೆಂಬರ್ ಕನ್ನಡ ರಾಜೋತ್ಸವವಾಗದೆ, ಇಂತಹ ಕಾರ್ಯಕ್ರಮಗಳ ಮೂಲಕ ಜನರನ್ನು ಎಚ್ಚರಿಸುವ ಕಾರ್ಯಕ್ರಮವಾಗಬೇಕು ಎಂದರು.

ಪ್ರಪಂಚದಲ್ಲಿ ಬಳಕೆಯಾಗುತ್ತಿರುವ ಅತ್ಯಂತ ಹಿರಿಯ ಭಾಷೆಗಳಲ್ಲಿ ಕನ್ನಡವೂ ಒಂದು. ಸುಮಾರು 2500 ವರ್ಷಗಳ ಇತಿಹಾಸವಿರುವ ಈ ಭಾಷೆಯನ್ನು ಮುಂದಿನ ತಲೆಮಾರಿನ ಅನ್ನ ಕೊಡುವ ಭಾಷೆಯಾಗಿ ರೂಪಿಸಬೇಕಿದೆ. ವ್ಯವಹಾರಿಕ ಭಾಷೆಯಾದ ಇಂಗ್ಲಿಷ್‌ಗಿಂತಲೂ ಒಂದು ಕೈ ಮೇಲಾಗಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಬೇಕಾಗಿದೆ. ಶಾಲಾ-ಕಾಲೇಜುಗಳಲ್ಲಿ ಭಾಷೆಯ ಒಲವು ಹೆಚ್ಚುವಂತಹ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸುವ ಕೆಲಸ ಆಗಬೇಕು ಎಂದರು.

ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಲಿಂಗಮ್ಮ ಮಾತನಾಡಿ, 26ನೇ ವಾರ್ಡನ್ನು ಒಂದು ಮಾದರಿ ವಾರ್ಡಾಗಿ ರೂಪಿಸಲು ಇಲ್ಲಿನ ಕಾರ್ಪೋರೇಟರ್ ಶ್ರಮಪಡುತ್ತಿದ್ದು, ವಾರ್ಡಿನ ನಿವಾಸಿಗಳಾದ ನಾವುಗಳು ಅವರ ಕಾರ್ಯಗಳಿಗೆ ಕೈಜೋಡಿಸಿ, ಸ್ವಚ್ಚ, ಸುಂದರ ಬಡಾವಣೆಯಾಗಿ ಪರಿವರ್ತಿಸಲು ಶ್ರಮಿಸಬೇಕು ಎಂದರು.

ಮತ್ತೋರ್ವ ಪ್ರಶಸ್ತಿ ಪುರಸ್ಕೃತರಾದ ನಾಗರತ್ನ ಚಂದ್ರಪ್ಪ ಮಾತನಾಡಿ, ಕಳೆದ 20 ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ನನಗೆ ಈ ವಾರ್ಡಿನ ನಾಗರಿಕರು ಹಸಿರೇ ಉಸಿರು ಎಂಬ ತತ್ವದಡಿ ಹಲವಾರು ಗಿಡ ಮರಗಳನ್ನು ಬೆಳೆಸಿ, ಹಸಿರು ಮಯವಾಗಿಸಿದ್ದಾರೆ. ಇದನ್ನು ಮತ್ತಷ್ಟು ಮುಂದುವರೆಸಿಕೊಂಡು ಹೋಗುವ ಅಗತ್ಯವಿದೆ ಎಂದರು.

ನಗರಪಾಲಿಕೆಯ 26ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, ನಗರದ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ 26ನೇ ವಾರ್ಡ್‌ಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ, ಸ್ವಚ್ಚ ಮತ್ತು ಸುಂದರ ವಾರ್ಡಾಗಿ ರೂಪಿಸಲು ಕಾರ್ಪೋರೇಟರ್ ಆಗಿ ಆಯ್ಕೆಯಾದ ದಿನದಿಂದಲು ಶ್ರಮಿಸುತ್ತಿದ್ದೇನೆ. ನಗರಪಾಲಿಕೆ ಅಧಿಕಾರಿಗಳೊಂದಿಗೆ ಸೇರಿ, ವಾರ್ಡನ್ನು ಕಸಮುಕ್ತಗೊಳಿಸಲು ಶ್ರಮಿಸಲಾಗುತ್ತಿದೆ. ನಾಗರಿಕರು ತಮ್ಮೊಂದಿಗೆ ಕೈಜೋಡಿಸುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಾರ್ಡಿನ ಪ್ರಮುಖರಾದ ಸುಜಾತ ಚಂದ್ರಶೇಖರ್, ಪೌಳಿ ಶಂಕರಾನಂದ, ಅಚರ್ಡ್ ಸಂಸ್ಥೆಯ ಡಾ. ನಾಗಭೂಷಣ್, ಕೊಪ್ಪಲ್ ನಾಗರಾಜು, ಡಾ.ಸದಾಶಿವಯ್ಯ, ವೆಂಕಟೇಶ್, ಪ್ರೊ.ಡಿ. ಚಂದ್ರಪ್ಪ, ಜಯಪ್ರಕಾಶ್, ಶುಭಕರ್, ಗಂಗಾಧರ್, ತೇಜಸ್, ಬ್ಲೂಗಲ್ ಸಂಸ್ಥೆಯ ಯಧು ಮತ್ತಿತರರು ಉಪಸ್ಥಿತರಿದ್ದರು.

Leave a Comment