ಕನ್ನಡ ನಾಮ ಫಲಕ ಆಂದೋಲನಕ್ಕೆ ಕರವೇ ನಿರ್ಧಾರ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ.೬- ನಗರದ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿ ಏಕ ಕಾಲದಲ್ಲಿ ಕನ್ನಡ ನಾಮ ಫಲಕ ಆಂದೋಲನ ಆರಂಭಿಸಲು ಕರ್ನಾಟಕ ರಕ್ಷಣಾ ವೇದಿಕೆ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಹೋರಾಟ ಮಾಡಬೇಕಾದ ಅನಿರ್ವಾಯತೆ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಅಪಮಾನವಾಗುವ ಸಾಕಷ್ಟು ಪ್ರಕರಣಗಳು ಜರುಗಿವೆ. ಇಂತಹ ಪರಿಸ್ಥಿತಿಗಳ ನಿವಾರಣೆಗಾಗಿ ವಿಮಾನ ನಿಲ್ದಾಣದಲ್ಲಿ ಕನ್ನಡ ಭಾಷೆ ಮಾತನಾಡುವ ಉದ್ಯೋಗಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಸೂಕ್ತ ಸಂಖ್ಯೆಯಲ್ಲಿ ನಿಯೋಜಿಸಬೇಕೆಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಸುದ್ದಿ ಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಿಬಿಎಂಪಿ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಲು ಬಿಬಿಎಂಪಿ ಹೊರಡಿಸಿರುವ ಆದೇಶ ಅನುಷ್ಠಾನವಾಗದ ಕಾರಣ ಪರಭಾಷೆಗಳ ಕಾರುಬಾರು ಜಾಸ್ತಿಯಾಗಿದೆ.

ಪರಭಾಷಿಕರಿಗೆ ಕನ್ನಡ ಪರಿಚಯಿಸುವ ಮಾಧ್ಯಮಗಳ ಕೊರತೆ ನಮಗಿದೆ ಎಂದರು. ಬಿಬಿಎಂಪಿ ಆದೇಶ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಅಂತಹ ವ್ಯಾಪಾರಿಗಳ ಪರವಾನಿಗೆ ರದ್ದು ಪಡಿಸಬೇಕಿದೆ. ಪರವಾನಿಗೆ ರದ್ದು ಪಡಿಸುವ ವರೆವಿಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದರು.

ಬೆಂಗಳೂರು ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕು. ಕೆಂಪೇಗೌಡರ ಸಾಧನೆಗಳ ಮಾಹಿತಿ ಫಲಕ ಅಳವಡಿಸಬೇಕು. ವಿಮಾನ ನಿಲ್ದಾಣದಿಂದ ಹೊರ ಬರುವ ರಸ್ತೆ ಬದಿಗಳಲ್ಲಿ ಕನ್ನಡ ಹಿರಿಮೆ ಸಾರುವ ಮಾಹಿತಿ ಫಲಕಗಳನ್ನು ಚಿತ್ರ ಸಹಿತ ಅಳವಡಿಸಬೇಕು. ವಿಮಾನ ನಿಲ್ದಾಣ ಉದ್ಯೋಗಿಗಳಲ್ಲಿ ಸಾಕಷ್ಟು ಕನ್ನಡ ಮಾತನಾಡುವವರಿರಬೇಕು. ವಾಣಿಜ್ಯ ವ್ಯಾಪಾರ ಮಳಿಗೆಗಳ ನಾಮ ಫಲಕ ಬಿಬಿಎಂಪಿ ಆದೇಶ ಪಾಲಿಸುವಂತಿರಬೇಕು.

ಆದೇಶ ಪಾಲಿಸದವರ ಪರವಾನಿಗೆ ರದ್ದು ಪಡಿಸಬೇಕು ಎಂದು ಅವರು ಒತ್ತಾಯಿಸಿದರು.

Leave a Comment