ಕನ್ನಡ ಕಲಿಸದ ೯೦ ಶಾಲೆಗಳಿಗೆ ನೋಟಿಸ್

ಬೆಂಗಳೂರು, ನ. ೧೩- ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ಕ್ರಮ ಕೈಗೊಳ್ಳದ ೯೦ ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕಾರಣ ಸಮಾಧಾನಕರ ವಾಗದಿದ್ದಲ್ಲಿ ಆ ಶಾಲೆಗಳು ಮಾನ್ಯತೆಯನ್ನು ರದ್ದು ಪಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂದಿಲ್ಲಿ ತಿಳಿಸಿದರು.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂಬ ಕನ್ನಡ ಕಲಿಕಾ ಕಾಯ್ದೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ ಹಾಗೂ ಇಲಾಖೆಯ ಅಧಿಕಾರಿಗಳು ಶಿಕ್ಷಣ ನಿರಂಜನಾರಾಧ್ಯ ಅವರ ಜೊತೆ ಸಭೆ ನಡೆಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸದೆ ಇರುವ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ನನ್ನ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ರಚಿಸಲಾಗಿದೆ. ಈ ಸಭೆ ಪ್ರತಿ ಮೂರು ತಿಂಗಳಿಗೊಮ್ಮೆ ಸೇರಿ, ಶಾಲೆಗಳಲ್ಲಿ ಕನ್ನಡ ಕಲಿಕೆ ಬಗ್ಗೆ ಪರಿಶೀಲನೆ ನಡೆಸಲಿದೆ ಎಂದು ಅವರು ತಿಳಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಈ ಶಾಲೆಗಳಿಗೆ ಭೇಟಿ ನೀಡಿ ಕನ್ನಡ ಕಲಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದರ ಜೊತೆಗೆ ಕನ್ನಡ ಶಿಕ್ಷಕರು ಇದ್ದಾರೆ ಎಂಬ ಬಗ್ಗೆಯೂ ಅಗತ್ಯ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರೀಯ ವಿದ್ಯಾಲಯಗಳಲ್ಲೂ ಕನ್ನಡ ಕಲಿಕೆಯ ಬಗ್ಗೆ ಪರಿಶೀಲನೆ ನಡೆಸಬೇಕು. ಆ ಶಾಲೆಗಳಲ್ಲಿ ಕನ್ನಡ ಪ್ರಥಮ ಮತ್ತು ದ್ವಿತೀಯ ಕಲಿಸಲಾಗುತ್ತದೆ ಎಂಬ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಕಲಿಸುವಲ್ಲಿ ೪೪ ಶಾಲೆಗಳಲ್ಲಿ ವಿಫಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಅಧ್ಯಕ್ಷರು ಹೇಳಿದ್ದಾರೆ.
ದಕ್ಷಿಣ ಮತ್ತು ಉತ್ತರ ವಲಯದ ಡಿಡಿಪಿಐ ಅಧಿಕಾರಿಗಳು ಈ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿ, ಇದೇ ತಿಂಗಳ ೨೪ರ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳ ಸಬಲೀಕರಣ ಹಾಗೂ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ, ಮಕ್ಕಳನ್ನು ಶಾಲೆಗೆ ಆಕರ್ಷಿಸುವ ಬಗ್ಗೆ ೨೦೧೭ರಲ್ಲಿ ಕನ್ನಡ ಅಭಿವೃದ್ಧಿಪ್ರಾಧಿಕಾರ ರಚಿಸಿದ ಸಮಿತಿ ೨೧ ಶಿಫಾರಸ್‌ಗಳನ್ನು ನೀಡಿತ್ತು. ೨೧ನೇ ಶಿಫಾರಸಿನಲ್ಲಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಸಬಲೀಕರಣದ ಬಗ್ಗೆ ಸಮಿತಿ ಹೆಚ್ಚು ಆದ್ಯತೆ ನೀಡಿದ್ದು, ಇದೀಗ ನನ್ನ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ ಸಮಿತಿ ರಚಿಸಿ, ೩ ತಿಂಗಳಿಗೊಮ್ಮೆ ಸಭೆ ನಡೆಸಿ, ಪರಾಮರ್ಶೆ ನಡೆಸಿದೆ ಎಂದು ಹೇಳಿದರು.
ನ. ೨೧ ರಿಂದ ಡಿ. ೨೦ರವರೆಗೆ ಕೇಂದ್ರ ಸರ್ಕಾರದಿಂದ ೧೧ ಲಕ್ಷ ೭೧ ಸಾವಿರ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಶಾಲಾ ಗಣತಿ ನಡೆಯಲಿದೆ ಎಂದು ಹೇಳಿದರು.

Leave a Comment