ಕನ್ನಡಿಗರ ಆಕ್ರೋಶಕ್ಕೆ ಮಣಿದ ಕಟ್ಟಪ್ಪ : ಕ್ಷಮೆ ಯಾಚಿಸಿದ ಸತ್ಯರಾಜ್

ಬೆಂಗಳೂರು, ಏ.೨೧- ಕಾವೇರಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕಡೆಗೂ ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಕೋರಿದ್ದಾರೆ.
sಸತ್ಯರಾಜ್ ಹೇಳಿಕೆ ಖಂಡಿಸಿ ಕನ್ನಡಪರ ಹೋರಾಟಗಾರರು ಏ.೨೮ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ರಾಜ್ಯದಲ್ಲಿ ಬಾಹುಬಲಿ-೨ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಕನ್ನಡಿಗರ ಆಕ್ರೋಶಕ್ಕೆ ಮಣಿದ ಸತ್ಯರಾಜ್ ‘ನಾನು ಕನ್ನಡಿಗರ ವಿರೋಧಿಯಲ್ಲ. ಕಾವೇರಿ ವಿಚಾರದಲ್ಲಿ ನಾನು ಈ ಹೇಳಿಕೆ ನೀಡಿದ್ದೆ. ಆದರೆ ಇನ್ನು ಯಾವತ್ತಿಗೂ ನಾನು ಕನ್ನಡಿಗರ ವಿರುದ್ಧ ಮಾತನಾಡುವುದಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ. ಕರ್ನಾಟಕದಲ್ಲಿ ಬಾಹುಬಲಿ ಬಿಡುಗಡೆಗೆ ಅವಕಾಶ ಮಾಡಿಕೊಡಿ’ ಎಂದಿದ್ದಾರೆ.
ನಿನ್ನೆಯಷ್ಟೇ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ ತಾವೇ ಕನ್ನಡದಲ್ಲಿ ಮಾತನಾಡಿದ್ದ ವಿಡಿಯೋ ಬಿಡುಗಡೆಗೊಳಿಸಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.
‘ಸತ್ಯರಾಜ್ ಹೇಳಿಕೆಗೂ ಬಾಹುಬಲಿ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕಾವೇರಿ ಬಗ್ಗೆ ಸತ್ಯರಾಜ್ ಅಭಿಪ್ರಾಯ ಅವರಿಗೆ ಮಾತ್ರವೇ ಸೀಮಿತ. ನಟನೊಬ್ಬನ ವೈಯಕ್ತಿಕ ಅಭಿಪ್ರಾಯದಿಂದ ಆತ ನಟಿಸಿದ ಚಿತ್ರಕ್ಕೆ ತೊಂದರೆಯಾಗಬಾರದು. ಎಲ್ಲ ಚಿತ್ರಕ್ಕೂ ಪ್ರೋತ್ಸಾಹ ನೀಡಿದಂತೆ ಬಾಹುಬಲಿಗೂ ತುಂಬು ಹೃದಯದ ಪ್ರೋತ್ಸಾಹ ನೀಡಿ’ ಎಂದು ಕೇಳಿಕೊಂಡಿದ್ದರು.
ರಾಜ್ಯದ ಜೀವನಾಡಿಯಾಗಿರುವ ಕಾವೇರಿ ನೀರಿನ ಹೋರಾಟದ ಸಂದರ್ಭದಲ್ಲಿ ತಮಿಳು ನಟ ಸತ್ಯರಾಜ್ ಕನ್ನಡಿಗರು, ಸಂಸ್ಕೃತಿ ಹಾಗೂ ಕಾವೇರಿಯ ಬಗ್ಗೆ ಅಷ್ಟೇ ಅಲ್ಲದೆ ಕನ್ನಡ ಚಳುವಳಿಯ ನಾಯಕರಾದ ವಾಟಾಳ್ ನಾಗರಾಜ್ ಕುರಿತು ಕುಚ್ಯೋದ್ಯದ ಮಾತುಗಳನ್ನಾಡಿದ್ದರು.

Leave a Comment