ಕನ್ನಡವಾಗಲೀ, ಹಳಗನ್ನಡವಾಗಲೀ ಸಮೃದ್ಧಿಗೆ ಸುಮಧುರ – ಸುಲಲಿತ

ಕನ್ನಡದ ರಾಯಭಾರಿಯಾದ ಬಾಲಕಿ

ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ. ಅದು ಒಂದು ಸಂಸ್ಕೃತಿ ಎಂದು ವಿವರಿಸುವಾಗ ಅದರ ಶಕ್ತಿಯೇ ಬೇರೆ. ಈ ಶಕ್ತಿಯು ನೆನಪುಗಳನ್ನು ಉದ್ದೀಪಿಸುವ ಅಗ್ನಿಕುಂಡ. ಯಾಕೆಂದರೆ ಈ ನೆನಪುಗಳೇ ನಮಗೆ ಅಸ್ಮಿತೆಯನ್ನು ಕೊಡುತ್ತವೆ. ಅವರವರ ಮನೋಧರ್ಮಗಳಿಗೆ ತಕ್ಕಂತೆ ಒದಗುವ ಕನ್ನಡ ಭಾಷಾ ಪದ ಸಂಪತ್ತಿನ ಸವಿ ಉಂಡವರೇ ಬಲ್ಲರು. ಪಂಪ, ರನ್ನರಿಂದ ಶಿವರಾಮ ಕಾರಂತ, ಕುವೆಂಪು, ದ.ರಾ. ಬೇಂದ್ರೆ, ಇತ್ತೀಚೆಗಿನ ಕನ್ನಡದ ಸಾಹಿತ್ಯ ಲೋಕದ ಮಹನೀಯರವರೆಗೂ, ಅವರೆಲ್ಲರೂ ಕನ್ನಡವನ್ನು ಒಲಿಸಿಕೊಂಡ ರೀತಿ, ಭಾಷೆಯ ಸೊಬಗು ಕನ್ನಡಿಗರ ಹೃದಯಗಳಲ್ಲಿ ಪುಳಕ ತರುವಂತಹದ್ದು. ಇಂದಿನ ಯುವ ಪೀಳಿಗೆ ಕನ್ನಡವನ್ನು ಬಳಸದೇ, ಮಾತೃ ಭಾಷೆಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡುತ್ತಿಲ್ಲ ಎಂಬ ಆತಂಕದ ನಡುವೆ, ಕನ್ನಡ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಭರವಸೆ ಮೂಡಿಸುತ್ತಿದ್ದಾರೆ ಸಮೃದ್ಧಿ ಯಾದವ್. ವಯಸ್ಸು ೧೧ ಆಗುವಷ್ಟರಲ್ಲೇ ಬಹುತೇಕರಿಗೆ ಕಬ್ಬಿಣದ ಕಡಲೆಯಾಗಿರುವ ಕನ್ನಡ – ಹಳಗನ್ನಡವನ್ನು ಹರಳು ಉರಿದಂತೆ ಒಪ್ಪಿಸುತ್ತಾರೆ ಈ ಬಾಲಕಿ. ಕನ್ನಡವನ್ನು ಮತ್ತಷ್ಟು ಸಮೃದ್ಧಿಗೊಳಿಸಲು ಪಣತೊಡುವ ಮೂಲಕ, ಕನ್ನಡ ಪ್ರೇಮಿಗಳ ಮನಸೂರೆಗೊಂಡಿದ್ದಾರೆ. ಅಲ್ಲದೇ ಕನ್ನಡ ಕಣ್ಮಣಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಆಕೆಯ ಕನ್ನಡ ಪ್ರೀತಿ ಕಂಡು ಕನ್ನಡಿಗರ ಮೂಕವಿಸ್ಮಿತಗೊಂಡಿದ್ದು ಸುಳ್ಳಲ್ಲ.

s1

ಸಮೃದ್ಧಿ, ಕನ್ನಡ ಖಾಸಗಿ ಚಾನೆಲ್‌ನ ರಿಯಾಲಿಟಿ ಶೋ ಕನ್ನಡ ಕಣ್ಮಣಿಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಇದರಲ್ಲಿ ಭಾಗವಹಿಸಿದ್ದ ಗೌರವಾರ್ಥ ಕನ್ನಡ ಕಣ್ಮಣಿ ಎಂದು 850 ಬಾರಿ ಪೋಸ್ಟ್ ಕಾರ್ಡ್ ನಲ್ಲಿ ಒಂದು ವಾರದಲ್ಲಿಯೇ ಬರೆದು ಕನ್ನಡತನ ಮೆರೆದಿದ್ದಾರೆ. ಈ ಮುಖೇನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಕನ್ನಡದ ಗರಿ ಬೀಸುವಂತೆ ಮಾಡುವ ಪ್ರಯತ್ನ ಕೂಡ ನಡೆಸಿದ್ದಾರೆ. ಹಾಗೂ ಪ್ರಧಾನಿ ಮೋದಿಗೆ ಕನ್ನಡದಲ್ಲಿ ಪತ್ರ ಬರೆದು ಶಿಕ್ಷಣ ವ್ಯವಸ್ಥೆ ಬದಲಿಸುವಂತೆ ಮನವಿ ಮಾಡಿದ್ದಾರೆ.

*ಸಮೃದ್ಧಿ ಹಿನ್ನಲೆ?
ಅನಿಲ್ ಕುಮಾರ್ ಯಾದವ್ ಹಾಗೂ ಭಾರತಿ ದಂಪತಿಗಳ ಪುತ್ರಿಯಾದ ಸಮೃದ್ಧಿ ಎ ಯಾದವ್ ನಗರದ ವಿಶ್ವಕಲಾನಿಕೇತನ ಮಾಡೆಲ್ ಇಂಗ್ಲೀಷ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಆಸೆಯನ್ನು ಹೊಂದಿರುವ ಪೋಷಕರೇ ತಮ್ಮ ಮಗಳಿಗೆ ಅದಮ್ಯ ಚೇತನವಾಗಿದ್ದಾರೆ. ಕನ್ನಡದ ಮೇಲೆ ಮಗಳಲ್ಲಿ ಅಪಾರ ಗೌರವ ಮೂಡಿಸುವ ಮೂಲಕ ಅವರು, ಕನ್ನಡದ ಘಮ ಘಮ ಪಸರಿಸುವಂತೆ ಮಾಡಲು ಬೆಲ್ಲದ ನೀರೆರುಯುತ್ತಿದ್ದರೆ. ಪೋಷಕರ ಒತ್ತಾಸೆ ಬಳಸಿಕೊಂಡು, ಸಮೃದ್ಧಿ ನವ್ಯ ಕನ್ನಡದ ಜೊತೆ, ಹಳಗನ್ನಡವನ್ನೂ ಕಲಿತು ನಿಜಕ್ಕೂ ಅಚ್ಚರಿ ಮೂಡಿಸಿದ್ದಾರೆ. ಇದು ಅವರನ್ನು ಅಪರೂಪದಲ್ಲಿ ಅಪರೂಪ ಎನ್ನುವಂತೆ ಮಾಡಿದೆ.

s3

* ಹಳೆಗನ್ನಡ ಕಲಿಯುವ ಆಸಕ್ತಿ ಹೇಗೆ ಬಂತು?
೫ನೇ ಶತಮಾನದಲ್ಲಿ ಬನವಾಸಿಯಲ್ಲಿ ಕದಂಬರ ಆಳ್ವಿಕೆ ಸಮಯದಲ್ಲಿ ಬಳಸುತ್ತಿದ್ದ ಹಳೆಗನ್ನಡವನ್ನು ೬ನೇ ತರಗತಿಯಲ್ಲಿ ಓದುತ್ತಿರುವ ಸಮೃದ್ಧಿ, ಸಾಕಷ್ಟು ಹಳೆಗನ್ನಡ ಪದ್ಯವನ್ನು ಪಟಪಟ ಅಂತ ಹೇಳುತ್ತಾರೆ. ಹಳೆಗನ್ನಡ ಎಲ್ಲರಿಗೂ ಓದಲು, ಮಾತನಾಡಲು ಬಹಳ ಕಷ್ಟವಾಗುತ್ತದೆ. ಹಳೆಗನ್ನಡ ಹೇಳುವಾಗ ನಾಲಿಗೆ ಸರಿಯಾಗಿ ಒರಳಬೇಕು. ಆದರೆ ಸಮೃದ್ಧಿ ಹಳೆಗನ್ನಡ ಪದ್ಯಗಳ ಒಪ್ಪಿಸುವ ರೀತಿ ಎಂತಹವರನ್ನು ಮಂತ್ರಮುಗ್ಧರನ್ನಾಜಿಸುತ್ತದೆ. ಮನಸ್ಸಿಗೆ ಮುದ ನೀಡುತ್ತದೆ.

“ನನ್ನ ತಾಯಿ ಭಾರತಿ ರನ್ನನ ಗದಾಯುದ್ಧ ಓದುತ್ತಿದ್ದರು. ಅದನ್ನು ನೋಡಿ ನನಗೂ ಕಲಿಯಬೇಕೆಂಬ ಆಸೆ ಉಂಟಾಯಿತು. ಅಮ್ಮ ನನಗೆ ಹೇಳಿಕೊಡಲು ಆರಂಭಿಸಿದರು. ಹಳೆಗನ್ನಡ ಹೇಗೆ ಉಚ್ಛರಿಸಬೇಕೆಂದು ಆಡಿಯೋ ರೆಕಾರ್ಡ್ ಮಾಡಿ ತೋರಿಸುತ್ತಿದ್ದರು. ನಾನು ಧ್ವನಿ ಮುದ್ರಿಕೆಯನ್ನು ಮೇಲಿಂದ ಮೇಲೆ ಆಲಿಸಿದ್ದು, ನನ್ನ ಕಲಿಕೆಯನ್ನು ಬಹಳ ಸುಲಭ ಮಾಡಿತು. ಹಳೆಗನ್ನಡ ಉಚ್ಚಾರ ಮಾಡುವುದು ಕಷ್ಟ ಆದರೂ ಅದರ ಅರ್ಥ, ಪ್ರತಿ ಅಕ್ಷರಗಳನ್ನು ಸೂಕ್ಷ್ಮವಾಗಿ ತಿಳಿದುಕೊಂಡು ಅಭ್ಯಾಸ ಮಾಡಿದರೆ, ಭಾಷೆಯನ್ನು ನಮ್ಮದಾಗಿಸಿಕೊಳ್ಳಬಹುದು. ಅದಕ್ಕೆ ನನ್ನ ತಂದೆ, ತಾಯಿ ತುಂಬಾ ಪ್ರೋತ್ಸಾಹ ನೀಡುತ್ತಿದ್ದಾರೆ” ಎನ್ನುತ್ತಾರೆ ಸಮೃದ್ಧಿ.

img-20191102-wa0045

 

* ಮುಂದಿನ ನಿನ್ನ ಗುರಿ?
ಹಳೆಗನ್ನಡದ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡು, ಅಧ್ಯಯನ ಮಾಡುವ ಜೊತೆಗೆ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾರಂತೆ ನಾನು ಕನ್ನಡ ನಿರೂಪಕಿ ಆಗಬೇಕು. ಇದರ ಜೊತೆಗೆ ಜೀವನದಲ್ಲಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವ ನ್ಯಾಯಾಧೀಶೆಯಾಗುವ ತವಕ ಇದೆ. ಇದರೊಂದಿಗೆ ನಾನು ಹೋದಲೆಲ್ಲ ಕನ್ನಡತನ ಮೆರೆಯುವುದೇ ನನ್ನ ಜೀವನದ ಬಹುದೊಡ್ಡ ಗುರಿ ಎನ್ನುತ್ತಾರೆ ಕನ್ನಡದ ರಾಯಭಾರಿಯಂತೆ ಭಾಸವಾಗುವ ಸಮೃದ್ಧಿ, ಕನ್ನಡದಲ್ಲೂ ಭಾಷಣ ಮಾಡುವ ಮೂಲಕ ಕನ್ನಡ ಘಮ ಹರಡುವ ಗುರಿ ಹೊಂದಿದ್ದಾರೆ.

* ಕನ್ನಡದ ಬಗ್ಗೆ ಒಲವು ಮೂಡಿಸುವ ಬಗೆ ಹೇಗೆ?
ಇನ್ನೊಂದು ಭಾಷೆಯನ್ನು ದ್ವೇಷಿಸುವುದರಿಂದ ನಮ್ಮ ಭಾಷೆ ಬೆಳೆಸಲಾಗದು. ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಮಾತ್ರ ತಾಯಿನುಡಿ ಬಗ್ಗೆ ಪ್ರೀತಿ ತೋರಿದರೂ ಮಾತೃಭಾಷೆ ಋಣ ತೀರಿಸಲಾಗದು. ತನುಮನದಲ್ಲಿ ಕನ್ನಡವನ್ನು ಪೂಜಿಸಿ ಆರಾಧಿಸಿ, ಹೊತ್ತು ಮೆರೆಸಬೇಕು. ಕನ್ನಡದ ಬಗ್ಗೆ ಆಸಕ್ತಿಯಿರುವ ಇತರ ಭಾಷಿಗರಲ್ಲೂ ಕನ್ನಡದ ಕಂಪು ಮೂಡಿಸಬೇಕು. ಇದು ನಮ್ಮ ಧ್ಯೇಯವಾಗಬೇಕು.

* ಕನ್ನಡ ಉಳಿವಿಗಾಗಿ ಸಮೃದ್ಧಿ ಸಂದೇಶ ಏನು?
ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಬಳಕೆ ಅಗತ್ಯವಾಗಿದೆ. ಬೇರೆ ಭಾಷೆ ಕಲಿಯೋಣ, ಜೊತೆಗೆ ನಮ್ಮ ಭಾಷೆ ಕಲಿಸೋಣ. ಮೊದಲು ಮಾತೃ ಭಾಷೆಗೆ ನಮ್ಮೆಲ್ಲರ ಆದ್ಯತೆ ಇರಲಿ. ಹೆತ್ತವ್ವ ಕನ್ನಡ ತಾಯಿಯ ಸೆರಗು ಹಿಡಿದು, ಆಕೆಯ ನೆರಳಿನಲ್ಲಿ ಎಲ್ಲರೂ ಒಟ್ಟಾಗಿ ಮುಂದೆ ಸಾಗೋಣ ಎನ್ನುತ್ತಾರೆ ಸಮೃದ್ಧಿ. ಈ ನಿಟ್ಟಿನಲ್ಲಿ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿ, ಅದರಲ್ಲಿ ಕನ್ನಡದ ಕಂಪು ಮತ್ತಷ್ಟು ಪಸರಿಸುವಂತೆ ಮಾಡುತ್ತಿರುವ ಈ ಪುಟ್ಟ ಬಾಲಕಿ, ಸ್ಪೂರ್ತಿಯ ಸೆಲೆಯಾಗಿದ್ದಾರೆ.

 

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂದು ಹೇಳುವಾಗು ನಿಜಕ್ಕೂ ಬೇಸರವಾಗುತ್ತದೆ. ನಾವು ಅಂತಹ ಪೋಷಕರಾಗಬಾರದೆಂದು ನಾವು, ನಮ್ಮ ಮಗಳಿಗೆ ಕನ್ನಡ ಕಲಿಸಬೇಕು ಎಂದು ಪಣತೊಟ್ಟೆವು. ಕನ್ನಡವನ್ನು ಐಚ್ಚಿಕ ಭಾಷೆಯಾಗಿ ಆಯ್ಕೆಮಾಡಿಕೊಂಡಿದ್ದ ನನಗೆ, ಸಹಜವಾಗಿ ಕನ್ನಡ ಸಾಹಿತ್ಯ ಓದುವ ಒಲವು ಇತ್ತು. ಅದನ್ನು ನನ್ನ ಮಗಳಿಗೂ ಮನವರಿಕೆ ಮಾಡಿಕೊಟ್ಟು, ಕನ್ನಡ ಎಲ್ಲರ ಮನದಲ್ಲಿ ಸದಾ ನಳನಳಿಸಿ, ಘಲ್ಲು ಘಲ್ಲೆನುತಾ ಕುಣಿಯುವಂತೆ ಮಾಡಬೇಕೆಂಬ ಹಂಬಲ ನಮ್ಮದು. ಅದಕ್ಕಾಗಿ ನಮ್ಮ ಕುಟುಂಬ ಸಮರ್ಪಿಸಿಕೊಂಡಿದೆ.
ಭಾರತಿ.ಎಸ್
ಸಮೃದ್ಧಿ ತಾಯಿ

Leave a Comment