ಕನ್ನಡದ ಮನರೂಪ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ

 

ಇತ್ತೀಚೆಗೆ ಚಂದನವನದಲ್ಲಿ ಬಿಡುಗಡೆಯಾಗಿದ್ದ ಮನರೂಪ ಚಿತ್ರ ಕೆಫೆ ಇರಾನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗೆ ಪಾತ್ರವಾಗಿದೆ.

ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದಲ್ಲಿ ‘ಉತ್ತಮ ಪ್ರಯೋಗಾತ್ಮಕ ಸಿನಿಮಾ’ ಎಂಬ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದಲ್ಲದೇ ಅಮೆರಿಕಾದ ಮಿಯಾಮಿ ಇಂಟರ್‌ನ್ಯಾಷನಲ್ ಚಲನಚಿತ್ರೋತ್ಸವ ಮತ್ತು ಟರ್ಕಿಯ ಇಸ್ತಾನ್‌ಬುಲ್ ಫಿಲ್ ಅವಾರ್ಡ್ಸ್ ಚಿತ್ರೋತ್ಸವಗಳಲ್ಲೂ ಮನರೂಪ ಆಯ್ಕೆಯಾಗಿದೆ.

ಬಹುತೇಕ ಸಿನಿ ಪ್ರೇಮಿಗಳಿಗೆ ಮನರೂಪ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಿರಲಿಲ್ಲ. ಹೊಸ ಬಗೆಯ ನಿರೂಪಣೆ ಮತ್ತು ವಿಚಿತ್ರ ಮನೋಭಾವವನ್ನು ಅನಾವಣಗೊಳಿಸುವ ಮನರೂಪ ಕಾಡಿನಲ್ಲೇ ಚಿತ್ರೀಕರಣಗೊಂಡ ಚಿತ್ರ. ಹೊಸ ತಲೆಮಾರಿನ ಒಂದು ವರ್ಗದ ಯುವಕರ ವಿಭಿನ್ನ ಆಸಕ್ತಿಯನ್ನು ವಿವರಿಸುವ ಡಾರ್ಕ್ ಪರಿಕಲ್ಪನೆ ಹೊಂದಿರುವ ಸೈಕಲಾಜಿಕಲ್ ಥ್ರಿಲ್ಲರ್ ಕನ್ನಡ ಸಿನಿಮಾ ಇದಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗೆ ಒಳಪಟ್ಟಿತ್ತು. ನಿಧಾನವಾಗಿ ಪ್ರಾರಂಭವಾಗುವ ಮನರೂಪ ನಿರೂಪಣೆ ಹಂತ ಹಂತವಾಗಿ ಪ್ರೇಕ್ಷಕರನ್ನು ಥ್ರಿಲ್ ಮಾಡುತ್ತದೆ.

m1

ಈಗ ಮನರೂಪ ಅಮೆಜಾನ್ ಪ್ರೈಮ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ, ಅನೇಕರು ಈ ಚಿತ್ರವನ್ನು ನೋಡಿ ವಿಭಿನ್ನ ಕಥಾಹಂದರದ ಸಿನಿಮಾ ಇದಾಗಿದೆ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮನರೂಪ ಪೋಸ್ಟರ್‌ಗಳನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಥೀಯೆಟರ್‌ನಲ್ಲಿ ಸಿಗದ ಮಾನ್ಯತೆ, ಅಮೆಜಾನ್ ಪ್ರೈಮ್‌ನಲ್ಲಿ ಸಿಗುತ್ತಿರುವುದಕ್ಕೆ ಮನರೂಪ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಕಿರಣ್ ಹೆಗಡೆ ಥ್ರಿಲ್ ಆಗಿದ್ದಾರೆ.

ಮನರೂಪ ಚಿತ್ರದಲ್ಲಿ ಹೊಸಬರೇ ಬಣ್ಣ ಹಚ್ಚಿದ್ದರು. ದಿಲೀಪ್ ಕುಮಾರ್, ಅನೂಷಾ ರಾವ್, ನಿಷಾ ಯಶ್ ರಾಮ್, ಆರ್ಯನ್, ಶಿವಪ್ರಸಾದ್, ಅಮೋಘ್ ಸಿದ್ಧಾರ್ಥ್, ಪ್ರಜ್ವಲ್ ಗೌಡ, ಗಜಾ ನೀನಾಸಂ, ರಮಾನಂದ ಐನಕೈ, ಬಿ. ಸುರೇಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಗೋವಿಂದರಾಜ್ ಛಾಯಾಗ್ರಹಣ, ಸರ್ವಣ ಅವರ ಸಂಗೀತ, ಲೋಕಿ-ಸೂರಿ ಅವರ ಸಂಕಲನ ಮತ್ತು ಹುಲಿವಾನ್ ನಾಗರಾಜ್ ಅವರ ಸೌಂಡ್ ಡಿಸೈನ್ ಈ ಚಿತ್ರಕ್ಕಿದೆ. ಸಾಹಿತಿ ಮತ್ತು ಪತ್ರಕರ್ತ ಮಹಾಬಲ ಸೀತಾಳಭಾವಿ ಅವರ ಸಂಭಾಷಣೆ ಬರೆದಿದ್ದಾರೆ.

Leave a Comment