ಕನ್ನಡಕ್ಕೆ ಸಿಕ್ಕಿದ ಮುತ್ತು……

ಗಡ್ಡಪ್ಪ, ಕಳ್ಳ ಸ್ವಾಮೀಜಿ, ಕಬಾಲಿ ಡ್ಯಾನ್ಸ್ ಮತ್ತು ರೆಮೋ ಪಾತ್ರಗಳಿಂದ ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಮುತ್ತುರಾಜ್ ಯಾರಿಗೆ ತಾನೇ ಗೊತ್ತಿಲ್ಲ…… ತೆಳ್ಳಗೆ, ತಲೆ ತುಂಬಾ ಕೂದಲು ಬಿಟ್ಟುಕೊಂಡು ಸ್ವಾಮೀಜಿ ತರ ಕಾಣುವ ಮುತ್ತುರಾಜ್ ಯಾರು ಎಂದರೆ ಕೂಡಲೇ ಗಡ್ಡಪ್ಪ, ಕಳ್ಳಸ್ಮಾಮಿಜೀ ಕಣ್‌ಮುಂದೆ ಬಂದು ಹೋಗುತ್ತಾರೆ. ಮುತ್ತುರಾಜ್ ’ಕಾಮಿಡಿ ಕಿಲಾಡಿಗಳು’ ಗ್ರ್ಯಾಂಡ್ ಫಿನಾಲೆ ತಲುಪಿದ್ದ ೧೦ ಜನರ ಪೈಕಿ ಒಬ್ಬರಾಗಿದ್ದರು. ಮೊದಲಿನಿಂದಲೂ ಕೊನೆವರೆಗೂ ಅವರ ಹಾಸ್ಯಪ್ರಜ್ಞೆ ಫಿನಾಲೆವರೆಗೂ ಕರೆತಂದಿದ್ದು ರೋಚಕವೇ ಕಥೆಯೇ ಸರಿ….

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಮಾಚಗೋನಹಳ್ಳಿ ಸಂಪೂರ್ಣ ಬರಪೀಡಿತ ಹಳ್ಳಿಯಾಗಿದ್ದು, ಅಲ್ಲಿಯೇ ಮುತ್ತುರಾಜ್ ಎಂಬ ಮುತ್ತು ಹುಟ್ಟಿ ಬೆಳೆದಿದ್ದು, ೧೦ ನೇ ತರಗತಿ ವರೆಗೆ ಬಲ್ಲೇನಹಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಸಿದ ಈ ಮುತ್ತು ಪಿಯುಸಿ ಮಾಡಿದ್ದು ಬನ್ನಂಗಾಡಿಯಲ್ಲಿ. ಆದರೆ ಮುತ್ತುರಾಜ್ ಓದಿದೆಲ್ಲಾ ಸಂಪೂರ್ಣ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಎಂಬುದು ಹೆಮ್ಮೆಯ ವಿಚಾರ.

ನಟನೆ ಬಗ್ಗೆ ಸಾಮಾನ್ಯವಾಗಿ ಚಿಕ್ಕಂದಿನಿಂದಲೂ ಆಸಕ್ತಿ ಹೊಂದಿದ್ದ ಮುತ್ತುರಾಜ್‌ಗೆ ಸಿನಿಮಾ, ಡ್ರಾಮಾ, ಸೀರಿಯಲ್ ಬಗ್ಗೆ ಅಷ್ಟಾಗಿ ಜ್ಞಾನವೇ ಇರಲಿಲ್ಲ. ಶಾಲಾ ಕಾಲೇಜುಗಳಲ್ಲಿನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಬಿಟ್ಟರೇ ಮತ್ಯಾವುದೇ ತರಬೇತಿಯನ್ನು ಅವರು ಪಡೆದಿಲ್ಲ. ಸುಮ್ನೆ ಹಾಡು ಹೇಳೋದು, ಡ್ಯಾನ್ಸ್, ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತ ಅವರಿಗೆ ನಟನೆ ಅನ್ನೋದು ಬೆಳೆಯುತ್ತಾ ಆಸಕ್ತಿ ಹುಟ್ಟಿಸುತ್ತಾ ಬಂತಂತೆ.

ಶಾಲೆಗಳಲ್ಲಿ ೩ನೇ ತರಗತಿಯಲ್ಲಿ ಇದ್ದಾಗ ಸಣ್ಣ ಪಾತ್ರಗಳಲ್ಲಿ ನಟಿಸಿಕೊಂಡು ಬಂದಿದ್ದರೂ ಅವರಿಗೆ ಅದು ನೆನಪಿಲ್ಲ, ಮುತ್ತುರಾಜು ಮೊದಲ ಬಾರಿಗೆ ವೇದಿಕೆ ಹತ್ತಿದ್ದು ೭ನೇ ತರಗತಿಯಲ್ಲಿದ್ದಾಗ ’ದಾನ ಶೂರ ಕರ್ಣ’ ಪೌರಾಣಿಕ ನಾಟಕದಲ್ಲಿ. ಅದರಲ್ಲಿ ಕೊರಮನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಎಲ್ಲರಿಗೂ ಗೊತ್ತಿರುವಂತೆ ಹಾಸ್ಯ ಮಾಡೋದು ತುಂಬಾನೆ ಕಷ್ಟ. ಕಲಾವಿದನಾಗಿ ಪರಕಾಯ ಪ್ರವೇಶ ಮಾಡಿದಾಗ ತುಂಬಾ ಸುಲಭ. ಹೊರಗೆ ಪ್ರೇಕ್ಷಕನಾಗಿ ನೋಡಿದಾಗ ನಗಿಸುವುದು ತುಂಬಾನೆ ಕಷ್ಟ ಎನ್ನುವುದು ಮುತ್ತರಾಜು ಅವರ ಅಭಿಪ್ರಾಯ….

ಇದುವರೆಗೆ ಯಾವ ಪಾತ್ರಗಳು ಸಮಾಧಾನ ಆಗಿಲ್ಲ ಎಂದು ಹೇಳುವ ಮುತ್ತುರಾಜ್‌ಗೆ ೩ ಅಥವಾ ೪ನೇ ಎಪಿಸೋಡ್ ನಲ್ಲಿ ’ಕಳ್ಳ ಸ್ವಾಮೀಜಿ’ ಪಾತ್ರ ಲೈಟ್ ಆಗಿ ಇಷ್ಟ ಆಗಿತ್ತಂತೆ, ವಿಷ್ಣುವರ್ಧನ್ ಸರ್. ಅವರ ವೈಯಕ್ತಿಕ ಜೀವನ ಮೊದಲು ಇಷ್ಟಪಟ್ಟು ಅವರ ಅನುಕರಣೆ ನಂತರ ಆಕ್ಟಿಂಗ್‌ಗೆ ಸ್ಫೂರ್ತಿ ಆಯಿತು ಎನ್ನುತ್ತಾರೆ. ಜೀವನದಲ್ಲಿ ತುಂಬಾನೆ ಸ್ಟ್ರಗಲ್ ಅನುಭವಿಸಿರುವ ನನಗೆ ಸಿನಿಮಾ, ಟಿವಿ, ಹಾಸ್ಯ ಕಾರ್ಯಕ್ರಮಗಳಲ್ಲಿ ನಟಿಸಲು ಆಫರ್ ಬರ್ತಿದೆ. ನೋಡಿಕೊಂಡು ಹೆಜ್ಜೆ ಹಾಕಬೇಕು ಅಂದುಕೊಂಡಿದ್ದೇನೆ. ಈ ಹಿಂದೆ ಯಾವುದೇ ಆಡಿಶನ್ ಗೆ ಹೋದ್ರು ಪಟ ಪಟ ಅಂತ ಸೆಲೆಕ್ಟ್ ಮಾಡ್ತಿದ್ರು. ಅರ್ಧ ಸಿನಿಮಾ ಕೆಲಸ ಮಾಡಿಸಿಕೊಳ್ಳೋರು. ಸಂಭಾವನೆ ಕೊಡುತ್ತಿರಲಿಲ್ಲ. ಆ ಸಿನಿಮಾನೂ ರಿಲೀಸ್ ಆಗ್ತಿರಲಿಲ್ಲ ಬಿಡಿ. ಹಾಗಾಗಿ ಮುಂದೆ ನೋಡಿಕೊಂಡು ಹೆಜ್ಜೆ ಹಾಕುತ್ತೇನೆ. ಕಾಮಿಡಿ ಕಿಲಾಡಿಗಳು ಒಳ್ಳೆ ಗೆಲುವನ್ನು ತಂದು ಕೊಟ್ಟಿದೆ ಅದನ್ನು ಹಾಗೆ ಮುಂದುವರೆಸಿಕೊಂಡು ಹೋಗಬೇಕೆಂಬುದೇ ನನ್ನ ಆಸೆ ಎನ್ನುತ್ತಾರೆ.

ಅಲ್ಲದೇ ನಾನು ’ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ಬಂದ ನಂತರ ವಿದೇಶಗಳಿಂದ ಕರೆಮಾಡಿ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮೀಟ್ ಮಾಡಬೇಕು ಅಂತಾರೆ. ವಿಶ್ ಮಾಡ್ತಾರೆ. ನನಗೆ ಈಗೊಂದು ತೃಪ್ತಿ ಸಿಕ್ಕಿದೆ. ಹೆಚ್ಚಾಗಿ ನಟನೆ ಬಗ್ಗೆ ಕಲಿಕೆ ನಿರಂತರವಾಗಿ ಸಿಕ್ಕಿದೆ ಅದೇ ದೊಡ್ಡ ಸಾಧನೆ ಮಾಡಿದಂತೆ ಎಂದು ಮುತ್ತುರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ಮನೆಕಡೆ ತುಂಬಾ ಸಾಲ ಇದೆ. ಒಬ್ಬನೇ ಮಗನಾನು. ನಮ್ಮ ತಂದೆಗೆ ಅಷ್ಟು ದುಡಿಮೆ ಇಲ್ಲ. ನಾನು ಜವಾಬ್ದಾರಿಯಿಂದ ಸಾಲ ತೀರಿಸಬೇಕು. ಹೀಗಿದ್ರು ನಮ್ಮ ತಂದೆ-ತಾಯಿ ಪರವಾಗಿಲ್ಲ ನೀನು ನಿನ್ನ ಆಸೆಯಂತೆ ಮುಂದುವರಿ ಅಂತ ಪ್ರೋತ್ಸಾಹ ಕೊಡ್ತಾರೆ. ಅವರ ಪ್ರೋತ್ಸಾಹ ಇಲ್ಲಿವರೆಗೂ ತಂದು ನಿಲ್ಲಿಸಿದೆ. ನಾನು ಅವರ ಹೊರೆ ಕಡಿಮೆ ಮಾಡಿ ಒಳ್ಳೆ ನಟನಾಗು ಗುರುತಿಸಿಕೊಳ್ಳವ ಬಯಕೆ ಇದೆ. ಅದಕ್ಕೆ ಅಭಿಮಾನಿಗಳ ಆಶಯ, ಆಶೀರ್ವಾದ ನಮ್ಮಂತಹ ಕಲಾವಿದರ ಮೇಲೆ ಹೀಗೆ ಇರಬೇಕು ಎಂದು ಹೇಳುತ್ತಾರೆ.

Leave a Comment