ಕನ್ನಂಬಾಡಿಯಿಂದ 1.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಕಾವೇರಿ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ
ಶ್ರೀರಂಗಪಟ್ಟಣ, ಆ.16- ಮಡಿಕೇರಿ, ಭಾಗಮಂಡಲ ಸೇರಿದಂತೆ ಕಾವೇರಿ ಜಲಾಯನ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಂಬಾಡಿ ಅಣೆಕಟ್ಟೆಯಿಂದ 1.50 ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. ಈಗಾಗಲೇ ಪಟ್ಟಣದ ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಾಲಯದ ಆವರಣ, ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮವಾಹಿನಿ ಪಿಂಡಪ್ರಧಾನ ಮಾಡುವ ಸ್ಥಳ, ಚೆಕ್ ಪೋಸ್ಟ್ ಬಳಿಯ ಶ್ರೀಸಾಯಿ ಆಶ್ರಮ, ಬಿದ್ಕೋಟೆ ಗಣಪತಿ, ರಾಮಕೃಷ್ಣ ಆಶ್ರಮ ಸೇರಿದಂತೆ ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಕಟ್ಟೆಚ್ಚರ:
ಕನ್ನಂಬಾಡಿ ಅಣೆಕಟ್ಟೆಗೆ ಹೆಚ್ಚಿನ ಒಳಹರಿವು ಹರಿದು ಬರುತ್ತಿರುವುದರಿಂದ ಕಾವೇರಿ ನದಿ ತೀರ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 1.5 ಲಕ್ಷ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಜನತೆ ಎಚ್ಚರಿಕೆಯಿಂದಿರಲು ಕಾವೇರಿ ನೀರಾವರಿ ಅಧಿಕಾರಿಗಳು ಪ್ರವಾಹ ಮುನ್ಸೂಚನೆ ನೀಡಿದ್ದಾರೆ. ಹಾಗೆಯೇ ತಗ್ಗು ಪ್ರದೇಶದ ಜನತೆ ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸುವಂತೆ ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.

Leave a Comment