ಕನಿಷ್ಟ ವೇತನ, ಪಿಎಫ್ ಪಾವತಿಗೆ ಒತ್ತಾಯಿಸಿ

ಆ.26 ಕೆಪಿಟಿಸಿಎಲ್, ಜೆಸ್ಕಾಂ ನೌಕರರ ಸಮಾವೇಶ
ರಾಯಚೂರು.ಆ.22- ಗುತ್ತೇದಾರರ ಕಿರುಕುಳ, ಕನಿಷ್ಟ ವೇತನ ಹಾಗೂ ಪಿಎಫ್ ವಂಚನೆ ವಿರುದ್ಧ ಸಂಘಟಿತ ಹೋರಾಟ ನಡೆಸಲು ಆ.26 ರಂದು ಕೆಪಿಟಿಸಿಎಲ್ ಮತ್ತು ಜೆಸ್ಕಾಂ ನೌಕರರ ಜಿಲ್ಲಾ ಸಮಾವೇಶ ಸ್ಥಳೀಯ ಸ್ಪಂದನಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆಂದು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಎಸ್. ವೀರೇಶ ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಟಿಸಿಎಲ್ 110 ಕೆವಿ ಮತ್ತು 220 ಕೆವಿ ಸ್ವೀಕರಣ ಕೇಂದ್ರ ಮತ್ತು ಜೆಸ್ಕಾಂ 33 ಕೆವಿ ಉಪ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ಶಿಫ್ಟ್ ಅಪರೇಟರ್, ಹೆಲ್ಪರ್ ಮತ್ತು ಡಾಟಾ ಎಂಟ್ರಿ ಅಪರೇಟರಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಗುತ್ತೇದಾರರು ಕಾರ್ಮಿಕರಿಗೆ ಕಿರುಕುಳ, ಕನಿಷ್ಟ ವೇತನ ಪಾವತಿಸದೆ ವಂಚಿಸುತ್ತಿದ್ದಾರೆಂದು ಆರೋಪಿಸಿದರು.
ಕಳೆದ ಅನೇಕ ವರ್ಷಗಳಿಂದ ನೌಕರರು ಕಡಿಮೆ ವೇತನ, ಪಿಎಫ್, ಇಎಸ್ಐ ಸೌಲಭ್ಯ ಪಡೆಯದೆ ಅತಂತ್ರ ಪರಿಸ್ಥಿತಿಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕಛೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಂಪ್ಯೂಟರ್ ಅಪರೇಟರಗಳಿಗೆ 14 ಸಾವಿರ ರೂ. ವೇತನ ಪಾವತಿಸದೆ, 7 ಸಾವಿರ ನೀಡಲಾಗುತ್ತಿದೆ. 2017 ರಲ್ಲಿ ನ್ಯೂ ಭಾರತ್ ಮ್ಯಾನ್‌ಪವರ್ ಏಜೆನ್ಸಿ ರಾಣಿಬೆನ್ನೂರು ಅವರ ಸಂಸ್ಥೆಯೂ ಒಂದು ವರ್ಷ ಪಿಎಫ್ ಪಾವತಿಸದೆ, ಅಕ್ರಮ ವೆಸಗಿದ್ದಾರೆ.
ಸಂಘವೂ ಸತತ ಹೋರಾಟ ನಡೆಸಿದ ಫಲವಾಗಿ ನೌಕರರ ಕನಿಷ್ಟ ವೇತನ ಏಪ್ರೀಲ್‌ನಿಂದ ಪರಿಷ್ಕರಿಸಲಾಗಿದೆ. ಕೆಪಿಟಿಸಿಎಲ್ ಕಾರ್ಮಿಕರಿಗೆ 14,700., ಜೆಸ್ಕಾಂ ಕಾರ್ಮಿಕರಿಗೆ 12,700 ಮತ್ತು ಕಂಪ್ಯೂಟರ್ ಅಪರೇಟರಗಳಿಗೆ 14 ಸಾವಿರ ನೀಡುವಂತೆ ಗುತ್ತೇದಾರರಿಗೆ ಸೂಚಿಸಲಾಗಿದೆ. ಆದರೆ, ಗುತ್ತೇದಾರರು ಪರಿಷ್ಕರಣೆಗೊಂಡ ವೇತನ ಪಾವತಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವುದು ಖಂಡನೀಯ.
ಜೆಸ್ಕಾಂ ಮತ್ತು ಕೆಪಿಟಿಸಿಎಲ್ ಕಾರ್ಮಿಕರಿಗೆ ಏಪ್ರೀಲ್‌ನಿಂದ ಪರಿಷ್ಕರಣೆಗೊಂಡ ಕನಿಷ್ಟ ವೇತನ ಪಾವತಿಸಬೇಕು. ಸೇರಿ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಸಮಾವೇಶ ಹಮ್ಮಿಕೊಂಡಿದ್ದು ಎಲ್ಲಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸುನೀಲ್, ದೀಪಕ್ ಉಪಸ್ಥಿತರಿದ್ದರು.

Leave a Comment