ಕನಕ ಜಯಂತಿ-ವಿವಿಧ ಬೇಡಿಕೆಗಳಿಗೆ ಹಕ್ಕೊತ್ತಾಯ

ಹುಬ್ಬಳ್ಳಿ, ನ.13- ರಾಜ್ಯದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನ.15 ರಂದು ಕನಕ ಜಯಂತಿ ಹಿನ್ನಲೆಯಲ್ಲಿ ಕನಕ ಜಯಂತಿಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಅದರಲ್ಲಿ ಕನಕರ ಸಮುದಾಯದ ವಿವಿಧ ಬೇಡಿಕೆಗಳ ಹಕ್ಕೋತ್ತಾಯವನ್ನು ಮಂಡಿಸಬೇಕೆಂದು ಧಾರವಾಡದ ಮನಸೂರಿನ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 532 ನೇ ಕನಕ ಜಯಂತಿಯನ್ನು ನ.15 ರಂದು ರಾಜ್ಯದಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ಇದರಲ್ಲಿ ಸರ್ಕಾರದ ನಿರಾಸಕ್ತಿ, ಜಿಲ್ಲಾಡಳಿತ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹಿಂದಿನ ಕಾಂಗ್ರೆಸ್ ಪಕ್ಷ ಇದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿ, ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಶರಣೆ ಅಕ್ಕಮಹಾದೇವಿ ಹೆಸರು ನಾಮಕರಣಗೊಳಿಸಿದೆ. ಅದೇ ರೀತಿ ಈಗಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕನಕ ಜಯಂತಿ ದಿನದಂದು ಕನಕರ ಸಮೂದಾಯದ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮಂಡನೆ ಮಾಡಬೇಕೆಂದು ತಿಳಿಸಿದರು.
ಕನಕ ಜಯಂತಿಯಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕನಕರ ಭಾವಚಿತ್ರ ಕಡ್ಡಾಯಗೊಳಿಸುವುದು, ರಾಜ್ಯದ ವಿವಿಗಳಲ್ಲಿ ಅದರಲ್ಲೂ ಕನಕರ ಜನ್ಮ ಸ್ಥಳದ ಜಿಲ್ಲೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕನಕರ ನಾಮಕರಣ ಮಾಡುವುದು, ಅಲ್ಲದೇ ಕನಕ ಅಧ್ಯಯನ ಪೀಠಗಳನ್ನು ಮಾಡಬೇಕು. ಕನಕ ಭವನ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ 10 ಕೋಟಿ ರೂ , ತಾಲೂಕು ಕೇಂದ್ರಗಳಲ್ಲಿ 5 ಕೋಟಿ ರೂ, ಹೋಬಳಿ ಗ್ರಾಮಗಳಲ್ಲಿ 2 ಕೋಟಿ ರೂ ನೀಡಿ ಕನಕ ಭವನ ನಿರ್ಮಿಸುವ ಘೋಷಣೆ ಮಾಡಿ ಕ್ರಮ ಕೈಗೊಳ್ಳುವುದು, ಇನ್ನೂ ಕುರುಬ ಸಮುದಾಯ ಅತ್ಯಂತ ಹಿಂದೂಳಿದ ಸಮೂದಾಯ ಆಗಿದ್ದು, ಅವರಿಗೆ ಪರಿಶಿಷ್ಟ ಪಂಗಡ ಮೀಸಲಾಯಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು. ಇದನ್ನು ಸಿಎಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
ಧಾರವಾಡ ಕೆಪಿಸಿಸಿ ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ಮಾತನಾಡಿ, ನ.15 ರಂದು ಕನಕ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಅದೇ ರೀತಿ ಜಿಲ್ಲೆಯಲ್ಲೂ ಆಚರಣೆ ಮಾಡುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆಯನ್ನು ಕರೆದಿದ್ದರು. ಆದರೆ ಸಭೆಯನ್ನು ಕನಕ ಜಯಂತಿಯ ಹಿಂದಿನ ಕೇವಲ ಎರಡು ದಿನಗಳ ಹಿಂದೆ ಕರೆದಿದ್ದು, ಈ‌ ಮೂಲಕ ಕನಕ ಜಯಂತಿಯಲ್ಲಿ ಸರ್ಕಾರದ ನಿರ್ಲಕ್ಷ್ಯ ದೋರಣೆ ತಿಳಿದುಬರುವುದು. ಸರ್ಕಾರ ಈ ದೋರಣೆಯನ್ನು ಕೈಬಿಟ್ಟು ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಜೊತೆಗೆ ಸಮುದಾಯದ ಹಲವಾರು ವರ್ಷಗಳ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದರೆ ರಾಜ್ಯದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ ನಲವಡಿ, ಮಂಜುನಾಥ ಮಟ್ಟಿ, ಪ್ರವೀಣ ಗೋಕಾವಿ ಸೇರಿದಂತೆ ಮುಂತಾದವರು ಇದ್ದರು.

Leave a Comment