ಕನಕ ಆಗಮನ

* ಚಿಕ್ಕನೆಟಕುಂಟೆ ಜಿ.ರಮೇಶ್
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ’ಕನಕ’ನ ಆಗಮನಕ್ಕೆ ವೇದಿಕೆ ನಿರ್ಮಾಣವಾಗಿದೆ. ಆರ್.ಚಂದ್ರು ಮತ್ತು ದುನಿಯಾ ವಿಜಯ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಬಹು ತಾರಾಗಣಚಿತ್ರ ಇದು.

’ಕನಕ’ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಸನಿಹದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ ಗಣರಾಜ್ಯೋತ್ಸವಕ್ಕೆ ಅದರಲ್ಲಿಯೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮರಾದ ಜ.೨೬ರಂದು ಚಿತ್ರವನ್ನು ತೆರೆಗೆ ತರುವ ಉದ್ದೇಶ ನಿರ್ದೇಶಕ,ನಿರ್ಮಾಪಕರೂ ಆಗಿರುವ ಚಂದ್ರು ಅವರಲ್ಲಿದೆ.ಚಿತ್ರದ ಮೂಲಕ ಹದಿನಾಲ್ಕು ವರ್ಷದ ಬಳಿಕ ಕೆ.ಪಿ ನಂಜುಂಡಿ ಚಿತ್ರಕ್ಕಾಗಿ ಬಣ್ಣಹಚ್ಚಿದ್ದಾರೆ. ಅದುವೇ ಚಂದ್ರು ಅವರ ಮೇಲಿನ ಪ್ರೀತಿ ಅಭಿಮಾನದಿಂದ ಎನ್ನುವುದು ವಿಶೇಷ.

ಚಿತ್ರ ಬಿಡುಗಡೆಯ ಸನಿಹಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರಕ್ಕಾಗಿ ಸಿದ್ದಪಡಿಸಿರುವ ಹಾಡು,ಟ್ರೈಲರ್ ಬಿಡುಗಡೆ ಸಮಾರಂಭವನ್ನು ಕಳೆದವಾರ ಆಯೋಜಿಸಲಾಗಿತ್ತು. ಅಲ್ಲಿ ಮಾತಿಗಿಳಿದ ಆರ್.ಚಂದ್ರು, ಸರಿ ಸುಮಾರು ೧೦ ರಿಂದ ೧೨ ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಚಿತ್ರದ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಇದುವರೆಗೂ ನಿರ್ಮಾಣ ಮಾಡಿರುವ ನನ್ನ ಚಿತ್ರಗಳಲ್ಲಿ ದುಬಾರಿ ವೆಚ್ಚದ ಸಿನಿಮಾ ಇದು. ಚಿತ್ರ ಮೂಡಿಬಂದಿರುವ ಪರಿ ಕಂಡು ಹಲವು ವಿತರಕರು ಖರೀದಿಗೆ ಮುಂದೆ ಬಂದಿದ್ದಾರೆ. ಇನ್ನೂ ಯಾರಿಗೂ ಕೊಟ್ಟಿಲ್ಲ.

ಬ್ರದರ್ ದುನಿಯಾ ವಿಜಯ್ ಅವರೊಂದಿಗೆ ಧಾರಾವಾಹಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ಆದಾದ ದಶಕಗಳ ಬಳಿಕೆ ಒಟ್ಟಿಗೆ ಸಿನಿಮಾ ಮಾಡಲು ಈಗ ಕಾಲ ಕೂಡಿಬಂದಿದೆ.ಕನಕ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.ಒಳ್ಳೆಯ ಚಿತ್ರ ಆಗಲಿದೆ ಎನ್ನುವ ವಿಶ್ವಾಸ ನನ್ನದು. ಆರಂಭದ ದಿನಗಳಲ್ಲಿ ಕೆಲಸ ಕಳೆದುಕೊಂಡ ದಿನಗಳಲ್ಲಿ ಮತ್ತೆ ಕೆಲಸ ಕೊಡಿಸಿದವರು ಹಿರಿಯ ಕಲಾವಿದ ಕೆ.ಪಿ ನಂಜುಂಡಿ. ಮೊದಲಿನಿಂದಲೂ ತಮ್ಮನ ರೀತಿ ನನ್ನನ್ನು ನೋಡುತ್ತಾರೆ. ಚಿತ್ರ ನಿರ್ಮಾಣದಲ್ಲಿ ಹಣಕಾಸಿನ ತೊಂದರೆಯಾದರೆ ಎದೆಗುಂದಬೇಡ ಬಾ ನಾನಿದ್ದೇನೆ ಎಂದು ಧೈರ್ಯ ತುಂಬುತ್ತಾರೆ. ನಿಜ ಜೀವನಕ್ಕೆ ಹತ್ತಿರವಾದ ಪಾತ್ರವನ್ನು ಅವರಿಗಾಗಿ ಮಾಡಲಾಗಿದೆ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಮೊದಲ ಚಿತ್ರದಿಂದಲೂ ಹಿರಿಯ ಕಲಾವಿದ ರಂಗಾಯಣ ರಘು,ಸಹಕಾರ ನೀಡುತ್ತಿದ್ದಾರೆ. ಕನಕ ಚಿತ್ರದಲ್ಲಿಯೂ ಮುಂದುವರಿದಿದೆ. ರವಿಶಂಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಲ್ಲ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಇದೇ ೨೬ ರಂದು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ. ಚಿತ್ರದ ಪ್ರೋಮೋಷನ್ ಹಾಡಿಗೆ ಖರ್ಚಾಗಿರುವ ಮೊತ್ತವನ್ನು ಸಂಗೀತ ನಿರ್ದೇಶಕ ನವೀನ್ ಸಜ್ಜುಗೆ ನೀಡುವುದಾಗಿ ಹೇಳಿಕೊಂಡರು ಚಂದ್ರು.

ನಟ ದುನಿಯಾ ವಿಜಯ್ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಂದ್ರು ಮತ್ತು ನನ್ನ ಗೆಳೆತನ ಹಳೆಯದು. ಚಿತ್ರಕ್ಕೆ ಮತ್ತು ತಂಡಕ್ಕೆ ಒಳ್ಳೆಯದಾಲಿ ಎಂದರೆ ನಟಿ ಮಾನ್ವಿತಾ ಹರೀಶ್, ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೆ.ಪಿ ನಂಜುಂಡಿ, ನಿಜಜೀವನಕ್ಕೆ ಹತ್ತಿರವಾದ ಪಾತ್ರ. ಚಂದ್ರು ದುಬಾರಿ ಖರ್ಚು ಮಾಡಿದ್ದಾರೆ. ಯಾಕೋ ಮಾರಾಯ ಇಷ್ಟೊಂದು ಖರ್ಚು ಮಾಡ್ತೀಯಾ ಎಂದು ಕೇಳಿದ್ದೇನೆ. ಗುಣಮಟ್ಟದಲ್ಲಿ ಆತ ರಾಜಿ ಮಾಡಿಕೊಂಡಿಲ್ಲ ಒಳ್ಳೆಯ ಚಿತ್ರವಾಗಲಿದೆ ಎಂದರು.ನವೀನ್ ಸಜ್ಜು, ಎಣ್ಣೆ ನಮ್ದು ಊಟ ನಿಮ್ದು ಹಾಡು ಎಲ್ಲರಿಗೂ ಇಷ್ಟವಾಗಲಿದೆ. ಗಾಯಕನಾಗಿದ್ದ ನನಗೆ ಸಂಗೀತ ನಿರ್ದೇಶಕನಾಗುವ ಅವಕಾಶ ಸಿಕ್ಕಿದೆ ಎಂದರು.

Leave a Comment