ಕದ್ದ ಟ್ರ್ಯಾಕ್ಟರ್ ಗುಜರಿಗೆ ಹಾಕಲು ಹೊರಟ ಕಳ್ಳರು ಅಂದರ್

 

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಜೂ.15- ಹೊಲದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‍ವೊಂದನ್ನು ಕಳ್ಳತನ ಮಾಡಿ ಅದನ್ನು ಬಿಡಿಭಾಗಗಳನ್ನಾಗಿ ಬೇರ್ಪಡಿಸಿ ಅವುಗಳನ್ನು ಗುಜರಿ ಅಂಗಡಿಯಲ್ಲಿ  ಮಾರಾಟಕ್ಕೆಂದು ಹೊರಟಿದ್ದ ಕಳ್ಳರು ಪೊಲೀಸರ ಅತಿಥಿಗಳಾಗಿದ್ದಾರೆ.

ತಾಲೂಕಿನ ದಸ್ತಾಪೂರ ಮತ್ತು ನಾವದಗಿ ಗ್ರಾಮದ ಸಿಮಾಂತರದಲ್ಲಿ ಬರುವ ಹೊಲದಲ್ಲಿ ನಿಲ್ಲಿಸಲಾಗಿದ್ದ ಸಿದ್ದಪ್ಪ ಶಾಂತಪ್ಪ ಪಾಟೀಲ್ ಎಂಬುವರ ಟ್ರ್ಯಾಕ್ಟರ್‍ವೊಂದನ್ನು ಜೂ.12ರ ರಾತ್ರಿ ಕಳ್ಳತನ ಮಾಡಿಕೊಂಡು ಹೋದ ಕಳ್ಳರು, ಕದ್ದ ಟ್ರ್ಯಾಕ್ಟರನ್ನು ಬಿಡಿಭಾಗಗಳಾಗಿ ಬೇರ್ಪಡಿಸಿ ಬಸವಕಲ್ಯಾಣದಲ್ಲಿ ಗುಜರಿ ಅಂಗಡಿಗೆ ಮಾರಾಟಕ್ಕೆಂದು ಹೋಗುತ್ತಿರುವಾಗ ಮಂಠಾಳ ಪೊಲೀಸರು ತಡೆದು ವಿಚಾರಣೆ ನಡೆಸಿ,ಮಹಾಗಾಂವ ಪೊಲೀಸರಿಗೆ ಒಪ್ಪಿಸಿದ್ದರು. ಮಹಾಗಾಂವ ಪೊಲೀಸರು ಆರೋಪಿಗಳನ್ನು  ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಾದ ನಾವದಗಿ(ಬಿ)ಯ ಯಲ್ಲಾಲಿಂಗ ಹಣಮಂತ ಕೊಳೆ, ಸಿದ್ದು ಅಲಿಯಾಸ ಸಿದ್ದನಗೌಡ ಹಣಮಂತ ಪಾಟೀಲ, ಶಿವಕುಮಾರ ಬಸವಂತರಾವ ಬಿರಾದಾರ  ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಹಾಗಾಂವ್ ಪೊಲೀಸರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗ್ರಾಮೀಣ  ಸಿಪಿಐ ನಾರಾಯಣ ಮತ್ತು ಮಹಾಗಾಂವ ಠಾಣೆ ಪಿಎಸ್‍ಐ ಪರಶುರಾಮ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಅವರು ಟ್ರ್ಯಾಕ್ಟರ್‍ನ  ಬಿಡಿಭಾಗಗಳನ್ನು ಗುಜರಿ ಅಂಗಡಿಗೆ  ಮಾರಾಟಕ್ಕೆಂದು ಬಸವಕಲ್ಯಾಣಕ್ಕೆ ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾಗಿ ತಿಳಿದುಬಂದಿದೆ.

Leave a Comment