ಕದಿರೇಶ್ ಹತ್ಯೆ ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು, ಫೆ. ೧೩- ಕದಿರೇಶ್ ಹತ್ಯೆ ಪ್ರಕರಣದ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಇಂದು ಪ್ರತಿಭಟನೆ ನಡೆಸಿತು.  ನಗರದ ಗೂಡ್ಸ್‌ಶೆಡ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕದಿರೇಶ್ ಹತ್ಯೆ ಪ್ರಕರಣ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ. ಕಾರಣ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಸದ ಪಿ.ಸಿ. ಮೋಹನ್ ಅವರು ಕದಿರೇಶ್ ಹತ್ಯೆ ಆರೋಪಿಗಳು ನಿನ್ನೆ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಆದರೆ, ಹತ್ಯೆಗೆ ನಿಜವಾದ ಕಾರಣ ಏನು ಎನ್ನುವುದನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಿಲ್ಲ.

ಹತ್ಯೆಗೆ ಸಂಬಂಧಿಸಿದಂತೆ ಸರ್ಕಾರ ದಿನಕ್ಕೊಂದು ಕಾರಣ ನೀಡುತ್ತಿದೆ. ಆದರೆ, ಹತ್ಯೆಗೆ ನಿಜವಾದ ಕಾರಣವನ್ನು ಸರ್ಕಾರ ಬಹಿರಂಗಪಡಿಸಬೇಕೆಂದು ಅವರು ಒತ್ತಾಯಿಸಿದರು. ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯಿಂದ ಇದುವರೆಗೂ ಸಾಕಷ್ಟು ಹತ್ಯೆ ಪ್ರಕರಣಗಳು ಜರುಗಿವೆ. ಸರ್ಕಾರ ಇಂತಹ ಹತ್ಯೆಗಳು ಮರುಕಳಿಸದಂತೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ಪ್ರತಿಭಟನೆಯಲ್ಲಿ ಕದಿರೇಶ್ ಪತ್ನಿ ಹಾಗೂ ಕಾರ್ಪೊರೇಟರ್ ರೇಖಾ, ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯವಕ್ತಾರ ಅನ್ವರ್ ಮಾರಪ್ಪಾಡಿ, ನಗರಾಧ್ಯಕ್ಷ ಸದಾಶಿವ, ಯುವಮೋರ್ಚಾ ಅಧ್ಯಕ್ಷ ನರಸಿಂಹ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Comment