ಕದಮ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ಧಾರ

 

ಕಲಬುರಗಿ,ಜೂ.19-ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಶೇ.18 ರಷ್ಟು ಮೀಸಲಾತಿ ಪಡೆಯುತ್ತಿರುವ ಸಮುದಾಯದವರು ಯಾವ ಜಿಲ್ಲೆಯಲ್ಲಿಯೂ ಅಧ್ಯಕ್ಷರಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸೂರ್ಯಕಾಂತ ಕದಮ ನೀಡಿರುವ ಹೇಳಿಕೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರಕಾರಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ನೌಕರರ ಸಂಘದ  ಜಿಲ್ಲಾಧ್ಯಕ್ಷ ಸೋಮಶೇಖರ್ ಎಸ್.ಮದನಕರ್ ಉಗ್ರವಾಗಿ ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 15 ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕದಮ ಅವರು ಈ ರೀತಿ ಹೇಳಿಕೆ ನೀಡಿರುವುದು ನೋವಿನ ಸಂಗತಿಯಾಗಿದೆ. ಅವರ ಈ ಹೇಳಿಕೆ ಖಂಡಿಸಿ ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ನೌಕರರು ಒಂದು ದಿನ ಕೆಲಸಕ್ಕೆ ಸಾಂಕೇತಿಕವಾಗಿ ರಜೆ ಹಾಕಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕದಮ ಅವರ ಹೇಳಿಕೆ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವಂತಹದ್ದಾಗಿದ್ದು, ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ಕದಮ ವಿರುದ್ಧ ಎಫ್ಐಆರ್ ಸಹ ದಾಖಲಿಸಲಾಗುವುದು ಎಂದು ಮದನಕರ್ ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಎ.ಮೌರ್ಯ ಮಾತನಾಡಿ, ಕದಮ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಕಮದ ವಿರುದ್ಧ ಅಟ್ರಾಸಿಟಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.

ಎಸ್.ಟಿ.ನೌಕರರ ಸಂಘದ ಅಧ್ಯಕ್ಷ ಮಾನಪ್ಪಾ ನಾಯಕ, ಭೋವಿ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದಾಬಿಮನಿ, ಮಾನಸಿಂಗ್ ಡಿ.ಎಸ್.ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Comment